ಭದ್ರಾವತಿಯಲ್ಲಿ ನಾಳೆಯಿಂದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ

megharaj
Published on

ಶಿವಮೊಗ್ಗ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಈ ಬಾರಿ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಭದ್ರಾವತಿಯಲ್ಲಿ ಆಯೋಜಿಸಿದೆ. ಜ.29 ಹಾಗೂ 30ರಂದು ಅಲ್ಲಿನ ಬಸವೇಶ್ವರ ಸಭಾ ಭವನದಲ್ಲಿ ಕಾರ್ಯಕಾರಣಿ ಆಯೋಜಿಸಲಾಗಿದೆ.

ಜ.30ರಂದು ಜಿಲ್ಲಾ ಕೋರ್ ಕಮಿಟಿ ಸಭೆಯೂ ಭದ್ರಾವತಿಯಲ್ಲೇ ನಡೆಯಲಿದೆ. ಫೆ.5ರಂದು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷರೇ ಅಲ್ಲಿ ಚುನಾವಣಾ ಕಾರ್ಯಾಲಯವನ್ನೂ ಉದ್ಘಾಟಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆಗೆ ಮೂರು ತಿಂಗಳ ಮುನ್ನವೇ ಕ್ಷೇತ್ರದಲ್ಲಿ ಸಂಘಟನೆ ಚುರುಕುಗೊಳಿಸುವುದು, ಕಾರ್ಯಕರ್ತರನ್ನು ಹುರಿದುಂಬಿಸುವುದು ನಮ್ಮ ಗುರಿಯಾಗಿದೆ. ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಸೇರಿದಂತೆ ಒಟ್ಟು 250 ಮಂದಿ ಅಪೇಕ್ಷಿತರು ಜಿಲ್ಲಾ ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ. ಭದ್ರಾವತಿ ಕ್ಷೇತ್ರದ ಸಮಸ್ಯೆಗಳು, ಜಿಲ್ಲೆಯ ಸಂಘಟನೆ ಹಾಗೂ ಪಕ್ಷದ ಆಂತರಿಕ ಸಂಗತಿಗಳ ಕುರಿತು ಚರ್ಚೆ ನಡೆಸಲಾಗುವುದು ಎಂದರು.

ಭದ್ರಾವತಿ ಕ್ಷೇತ್ರದಲ್ಲಿ 70 ಗ್ರಾಪಂ ಸದಸ್ಯರು ಸುಮಾರು 10 ಸಾವಿರ ಮತಗಳನ್ನು ಪಡೆದಿದ್ದಾರೆ. ನಗರಸಭೆ ಚುನಾವಣೆಯಲ್ಲಿ 14 ಸಾವಿರ ಮತಗಳು ಬಂದಿವೆ. ಲೋಕಸಭೆ ಚುನಾವಣೆಯಲ್ಲಿ 50 ಸಾವಿರ ಮತಗಳು ಲಭಿಸಿವೆ. ಈ ಎಲ್ಲ ಲೆಕ್ಕಾಚಾರಗಳು ಪಕ್ಷದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಗಳಾಗಿವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net