

ಶಿವಮೊಗ್ಗ: ಭದ್ರಾವತಿಯಲ್ಲಿ ಇತ್ತೀಚೆಗೆ ನಡೆದ ಗಲಭೆಗೆ ಸಂಬಂಧಿಸಿದಂತೆ ಶಾಸಕ ಬಿ.ಕೆ.ಸಂಗಮೇಶ್ವರ ಪುತ್ರನನ್ನು ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ.
ಬಸವರಾಜ ಬಂಧಿತ. ಕಳೆದ ಫೆ.೨೮ರಂದು ರಾತ್ರಿ ಕನಕ ಮಂಟಪದಲ್ಲಿ ಗಲಭೆ ನಡೆದಿತ್ತು. ಬಿಜೆಪಿ ಕೆಲ ಮುಖಂಡರು ಸೇರಿ ಹಲವರ ಮೇಲೆ ಶಾಸಕ ಸಂಗಮೇಶ್ವರ, ಶಾಸಕರ ಪುತ್ರ ಬಸವರಾಜ ಸೇರಿ ಹಲವರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು.
ಶಾಸಕ ಸಂಗಮೇಶ್ ಸೇರಿದಂತೆ ಅವರ ಬೆಂಬಲಿಗರು ಮತ್ತು ಕುಟುಂಬಸ್ಥರ ಮೇಲೆ ಜಾತಿ ನಿಂದನೆ ಮತ್ತು ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದವು.
ಗಲಭೆಗೆ ಸಂಬಂಧಿಸಿದಂತೆ ಪರ-ವಿರೋಧ ವ್ಯಕ್ತವಾಗಿತ್ತು. ವಿಧಾನ ಮಂಡಲ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ಶಾಸಕ ಸಂಗಮೇಶ್ವರ ಅಂಗಿ ಬಿಚ್ಚಿ ಪ್ರತಿಭಟಿಸಿದ್ದರು. ಈ ನಡುವೆ ಹಲ್ಲೆ ನಡೆಸಿದವರ ಬಂಧನಕ್ಕೆ ಒತ್ತಡ ಹೆಚ್ಚಾಗಿತ್ತು.
ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಭದ್ರಾವತಿ ಹಳೇ ಪೇಪರ್ ಟೌನ್ ಪೊಲೀಸರು ಶನಿವಾರ ಬೆಳಗ್ಗೆ ಚಿತ್ರದುರ್ಗದಲ್ಲಿದ್ದ ಬಸವರಾಜನನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ೧೫ಕ್ಕೆ ಏರಿಕೆಯಾಗಿದೆ.