ಶಿವಮೊಗ್ಗದಲ್ಲಿ 26ಕ್ಕೆ ಆಪ್ ದಶಮಾನೋತ್ಸವ ಸಂಭ್ರಮ

24 smg Manohar gowda
Published on

ಶಿವಮೊಗ್ಗ: ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಆಮ್ ಆದ್ಮಿ ಪಕ್ಷದ ಸಂಸ್ಥಾಪನಾ ದಿನದ ನಿಮಿತ್ತ ನ.26ರಂದು ಬೆಳಗ್ಗೆ 11ಕ್ಕೆ ಶಿವಪ್ಪ ನಾಯಕ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಲಾಗುವುದು ಎಂದು ಪಕ್ಷದ ಜಿಲ್ಲಾ ಸಂಘಟನಾ ಸಂಚಾಲಕ ಬಿ.ಆರ್.ಮನೋಹರಗೌಡ ತಿಳಿಸಿದರು.

ಪಕ್ಷದ ರಾಷ್ಟ್ರೀಯ ಸಂಯೋಜಕ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಕೇವಲ 10 ವರ್ಷದಲ್ಲಿ ಎರಡು ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಮಾನ್ಯತೆ ಪಡೆಯಲಿದ್ದು ಪಕ್ಷದ 10ನೇ ವರ್ಷದ ಸಂಸ್ಥಾಪನಾ ದಿನವನ್ನು ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಆಚರಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೆಹಲಿ ಮತ್ತು ಪಂಜಾಬ್ ಆಡಳಿತದ ಮಾದರಿಯು ರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಂಡಿದ್ದು ಸಾರ್ವಜನಿಕರಿಗೆ ಈ ಬಗ್ಗೆ ಪ್ರಚಾರ ಮಾಡಲಾಗುವುದು. ಸಾಮಾಜಿಕ ಕಳಕಳಿವುಳ್ಳ ವ್ಯಕ್ತಿಯಿಂದ ಕಾರ್ಯಕ್ರಮ ಉದ್ಘಾಟಿಸಲಾಗುವುದು. ವೇದಿಕೆ ಕಾರ್ಯಕ್ರಮ ಕೂಡ ಇರಲಿದೆ ಎಂದರು.

ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು ಮತ್ತು ನಾಗರಿಕರಿಗೆ ಸೌಲಭ್ಯಗಳನ್ನು ಕಲ್ಪಿಸುವ ಸರ್ಕಾರ ತರುವ ಬಗ್ಗೆ ಜನರನ್ನು ಜಾಗೃತಗೊಳಿಸಲಾಗುತ್ತಿದೆ. ಈಗಾಗಲೇ ಸಾವಿರಾರು ಮನೆಗಳನ್ನು ಸಂಪರ್ಕಿಸಿದ್ದು ಶೇ.90ರಷ್ಟು ಜನರು ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು. ಪ್ರಮುಖರಾದ ಎಸ್.ಹರೀಶ್, ಲಿಂಗರಾಜ್, ಬಿ.ಎಸ್.ನವೀಲೇಶ್, ಎನ್.ವಿನಯ್, ಅರುಣ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net