ಕರೊನಾ ತಡೆಗೆ ಕರ್ಫ್ಯೂ ಪರಿಹಾರವಲ್ಲ: ಎಚ್.ಎಸ್.ಸುಂದರೇಶ್

Sundresh H.S. (1) (1)
Published on

ಶಿವಮೊಗ್ಗ: ಕರೊನಾ ತಡೆಗೆ ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಒಂದೇ ಪರಿಹಾರವಲ್ಲ. ಕರ್ಫ್ಯೂ ಜಾರಿಗೊಳಿಸುವುದಕ್ಕೆ ತಮ್ಮ ಆಕ್ಷೇಪವೂ ಇಲ್ಲ. ಆದರೆ ಅನಗತ್ಯವಾಗಿ ಮಧ್ಯಮ ವರ್ಗದವರು ಬೀದಿಗೆ ಬರುವುದನ್ನು ತಪ್ಪಿಸಲು ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಒತ್ತಾಯಿಸಿದರು.

ಡಿಸೆಂಬರ್ ಬಳಿಕ ಕರೊನಾ 2ನೇ ಅಲೆ ಶುರುವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳದೆ ಕರೊನಾ ತಡೆಗೆ ಸಂಪೂರ್ಣ ವಿಫಲವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಬೆಂಗಳೂರಿನಲ್ಲಿ 15 ದಿನ ಮುಂಚಿತವಾಗಿಯೇ ಕರ್ಫ್ಯೂ ಜಾರಿಗೆ ತರಬೇಕಿತ್ತು. ಇದೀಗ ಹಲವು ನಗರಗಳಿಂದ ಜನರು ಗ್ರಾಮೀಣ ಪ್ರದೇಶಗಳಿಗೆ ಬರುತ್ತಿದ್ದಾರೆ. ಸ್ಥಳೀಯ ಶಾಸಕರು, ಸಚಿವರು, ಲೋಕಸಭಾ ಸದಸ್ಯರು ಗಮನಹರಿಸುತ್ತಿಲ್ಲ. ಕರೊನಾ ತಡೆಗೆ ಬೇಕಿರುವ ಉಪಕರಣಗಳನ್ನು ತರಿಸಿಕೊಳ್ಳುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಕರೊನಾ ಬಗ್ಗೆ ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪ ಸಾಕಷ್ಟು ಬಾರಿ ಹೇಳಿಕೆ ನೀಡುವ ಮೂಲಕ ಪ್ರಚಾರ ಮಾಡಿದ್ದಾರೆ. ಆದರೆ ಅದಕ್ಕೆ ಬೇಕಾದ ಪೂರ್ಣ ತಯಾರಿ ಮಾಡಿಕೊಳ್ಳಲಿಲ್ಲ. ಸೋಂಕಿತರಿಗೆ ಸಂಜೀವಿನಿಯಾಗಿರುವ ರೆಮ್‌ಡಿಸಿವರ್ ರೋಗಿಗಳ ಕೈಗೆ ಸಿಗುತ್ತಿಲ್ಲ. ಅದು ಬಿಜೆಪಿ ಕಾರ್ಯಕರ್ತರ ಕೈಯಲ್ಲಿವೆ. ಅದು ಉಡುಪಿ, ದಾವಣಗೆರೆಯಲ್ಲಿ ಸಾಬೀತಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಆಕ್ಸಿಜನ್ ಸಮಸ್ಯೆ ಸೃಷ್ಟಿಯಾಗಿದೆ. ಹೈಕೋರ್ಟ್ ಕೂಡ ಸರ್ಕಾರಗಳಿಗೆ ಛೀಮಾರಿ ಹಾಕಿದೆ. ದೇಶದ ಆರೋಗ್ಯ ತುರ್ತು ಪರಿಸ್ಥಿತಿ ತಲುಪಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು ಸೇರಿ ಅಸಂಘಟಿತ ಕಾರ್ಮಿಕರಿಗೆ ತಲಾ 25 ಸಾವಿರ ರೂ. ಖಾತೆಗೆ ಹಾಕಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net