

ಶಿರಹಟ್ಟಿ: ಪಟ್ಟಣದ 18ನೇ ವಾರ್ಡ್ನ ಶಿವಲಿಂಗಪ್ಪ ಕಪ್ಪತ್ತನವರ ಸೇರಿ ಸಿದ್ದರಾಮೇಶ್ವರ ನಗರ ಮತ್ತು ಬೇಂದ್ರೆ ಬಡಾವಣೆಯಲ್ಲಿ ವಾಸಿಸುವ ನಾಗಕರಿಕರು ಹದಗೆಟ್ಟ ರಸ್ತೆ, ಕುಡಿಯುವ ನೀರಿನ ಸೌಲಭ್ಯ, ಚರಂಡಿ ವ್ಯವಸ್ಥೆ ಹಾಗೂ ಬೀದಿದೀಪ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನವರು ಇಲ್ಲಗಳ ಮಧ್ಯೆ ಬದುಕುವಂತಾಗಿದೆ. ಇದು ಸ್ಥಳೀಯ ಪಟ್ಟಣ ಪಂಚಾಯಿತಿಯ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಹೊಸದಾಗಿ ರಚನೆಯಾದ 18ನೇ ವಾರ್ಡ್ ಹಾಗೂ ದೊಡ್ಡ ವಾರ್ಡ್ ಎಂದು ಗುರುತಿಸಿಕೊಂಡಿದ್ದು ಅನಿತಾ ಬಾರ್ಬರ ಸದಸ್ಯೆಯಾಗಿದ್ದಾರೆ. ತಹಸೀಲ್ದಾರ್ ಕಚೇರಿಯಿಂದ ಅನತಿ ದೂರದಲ್ಲಿರುವ ಈ ಬಡಾವಣೆಗಳಲ್ಲಿ 450ಕ್ಕೂ ಅಧಿಕ ಮನೆಗಳಿವೆ. ಶಿರಹಟ್ಟಿಯಿಂದ ರಾಜ್ಯ ಹೆದ್ದಾರಿ ಮಾರ್ಗದ ರಸ್ತೆಯಿಂದ ಈ ವಾರ್ಡ್ ಬಡಾವಣೆಗಿರುವ ಸಂಚಾರ ರಸ್ತೆ ಹದಗೆಟ್ಟು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಮನೆಗಳನ್ನು ನಿರ್ವಿುಸಿಕೊಂಡಿದ್ದರೂ ಚರಂಡಿ ನಿರ್ವಿುಸಿಲ್ಲ. ಹೀಗಾಗಿ, ಮಳೆ ನೀರು ಹರಿದು ಹೋಗಲು ಆಸ್ಪದ ಇಲ್ಲದೆ ರಸ್ತೆ ಮೇಲೆಯೇ ಹರಿಯುವುದರಿಂದ ರಸ್ತೆಗಳು ಕೆಸರುಮಯವಾಗಿ ಮಾರ್ಪಟ್ಟಿವೆ. ಇಂಥ ರಸ್ತೆಗಳಲ್ಲಿ ವಾಹನ ಸವಾರರು, ವಯೋವೃದ್ಧರು, ಶಾಲಾ ಮಕ್ಕಳು ಜೀವಭಯದಲ್ಲೇ ಸಂಚರಿಸುವಂತಾಗಿದೆ.
ಮನೆ ಬಳಕೆ, ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದ್ದರಿಂದ ಸೊಳ್ಳೆಗಳ ಉತ್ಪತ್ತಿಯಿಂದ ಹಲವಾರು ಸಾಂಕ್ರಾಮಿಕ ರೋಗಗಳ ಭಯದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ನವೋದಯ ತರಬೇತಿ ಕೇಂದ್ರವಿದ್ದು, ಕೆಸರುಮಯ ರಸ್ತೆಯಲ್ಲಿ ವಿದ್ಯಾಭ್ಯಾಸಕ್ಕೆ ತೆರಳಲು ಮಕ್ಕಳು ಹಿಂಜರಿಯುತ್ತಾರೆ. ಹೀಗಾಗಿ ಮಕ್ಕಳ ಪಾಲಕರೇ ಕೈಹಿಡಿದು ಶಾಲೆಗೆ ಕರೆದೊಯ್ಯುವ ಅನಿವಾರ್ಯತೆ ಎದುರಾಗಿದೆ.
ಅಸಮರ್ಪಕ ವಿದ್ಯುತ್ ಪೂರೈಕೆ, ಬೀದಿ ದೀಪಗಳ ನಿರ್ವಹಣೆಯಿಲ್ಲದೆ ರಸ್ತೆ ಇಕ್ಕೆಲ್ಲದಲ್ಲಿ ಗಿಡಕಂಟಿಗಳು ಬೆಳೆದಿರುವುದರಿಂದ ಹಾವುಗಳ ಆವಾಸ ಸ್ಥಾನವಾಗಿದೆ. ಇದರಿಂದಾಗಿ ರಾತ್ರಿಯಾಗುತ್ತಿದ್ದಂತೆ ಸ್ಥಳೀಯರು ಭಯಭೀತರಾಗಿ ಗೃಹಬಂಧನಕ್ಕೆ ಒಳಗಾಗುವಂತಾಗಿದೆ.
ಸ್ವಚ್ಛ ಭಾರತ ಯೋಜನೆ ಹಿನ್ನೆಲೆಯಲ್ಲಿ ಶೌಚಗೃಹಗಳು ಮತ್ತು ಸಮುದಾಯ ಶೌಚಗೃಹ ನಿರ್ವಣಕ್ಕೆ ಸರ್ಕಾರದಿಂದ ಅನುದಾನ ಇದ್ದರೂ ಕಾಮಗಾರಿ ಅನುಷ್ಠಾನ ಕೈಗೊಂಡಿಲ್ಲ. ಹೀಗಾಗಿ ನಿವಾಸಿಗಳು ಬಯಲು ಬಹಿರ್ದೆಸೆಗೆ ಗ್ಗಿಕೊಳ್ಳಬೇಕಾದ ಸ್ಥಿತಿಯಿದೆ.
ವಾರ್ಡ್ನಲ್ಲಿ ನಾಗರಿಕ ಸೌಲಭ್ಯ ಕಲ್ಪಿಸಲು ಅನುದಾನ ನೀಡಿ ಇಲ್ಲವಾದರೆ ವೋಟು ಹಾಕಿ ಗೆಲ್ಲಿಸಿದ ಜನ ನನ್ಗ ಛೀಮಾರಿ ಹಾಕ್ತಾರ ಎಂದು ಪ್ರತಿ ಸಭೆಯಲ್ಲೂ ಗಮನ ಸೆಳೆದು ಸಾಕಾಗೈತಿ. ಅಧಿಕಾರಿಗಳು ಇನ್ನಾದರೂ ಸಂಕಟಾ ಅರ್ಥ ಮಾಡಿಕೊಂಡ ಅನುದಾನ ಬಿಡುಗಡೆ ಮಾಡ್ಲಿ.| ಅನಿತಾ ಬಾರ್ಬರ ವಾರ್ಡ್ ಸದಸ್ಯೆ
ಲೇಔಟ್ ಪ್ರದೇಶದಲ್ಲಿ ನಿವೇಶನ ಖರೀದಿಸಿ ಮನೆ ನಿರ್ವಿುಸಿಕೊಂಡಿದ್ದರಿಂದ ಅಭಿವೃದ್ಧಿಗೆ ಸಂಬಂಧಿಸಿದ ಹಣ ಪಪಂಗೆ ಭರಣ ಮಾಡಿದ್ದರ ಬಗ್ಗೆ ಪರಿಶೀಲಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸಧ್ಯ ಅವರಿಗೆ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳಿಗೆ ಲೇಔಟ್ ಕುರಿತು ಮಾಹಿತಿ ಸಲ್ಲಿಸಿ ಅವರಿಂದ ಆದೇಶ ಬಂದರೆ ಮಾತ್ರ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯ.| ಮಲ್ಲೇಶ ಎಂ. ಮುಖ್ಯಾಧಿಕಾರಿ, ಶಿರಹಟ್ಟಿ ಪಪಂ