ಪತಿಗೆ ಜಯ ತಂದುಕೊಟ್ಟ ಪತ್ನಿ ಶಿವಲೀಲಾ

SHIVALEELA
Published on

ಧಾರವಾಡ: ಪತಿಯ ಗೆಲುವಿಗಾಗಿ ಶಿವಲೀಲಾ ವಿನಯ ಕುಲಕರ್ಣಿ ಅವರ ಹಗಲಿರುಳು ಶ್ರಮ ಸಾರ್ಥಕವಾಗಿದೆ. ಮಕ್ಕಳು, ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡು ಪ್ರಚಾರದಲ್ಲಿ ನಿರತರಾಗಿ ಪತಿಗೆ ಜಯ ತಂದುಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಧಾರವಾಡ 71ರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಚುನಾವಣೆ ಸಂದರ್ಭದಲ್ಲೂ ಜಿಲ್ಲೆ ಪ್ರವೇಶಕ್ಕೆ ನಿಷೇಧವಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿದ ಶಿವಲೀಲಾ, ಪುತ್ರಿ ವೈಶಾಲಿ, ಪುತ್ರ ಹೇಮಂತ, ಸಂಬಂಧಿಕರು ಹಾಗೂ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು. ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ತೆರಳಿ ಮನೆಮನೆಗೆ ಪ್ರಚಾರ ಮಾಡಿ, ವಿನಯ ಕುಲಕರ್ಣಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟರು. ರಾಜಕೀಯ ಷಡ್ಯಂತ್ರಗಳಿಗೆ ನೀವೇ ಉತ್ತರ ಕೊಡಿ ಎಂದು ಕೋರಿದ್ದರು. ಅದರಂತೆ ಜನ ತೀರ್ಪು ನೀಡಿ ವಿನಯ ಕುಲಕರ್ಣಿ ಅವರನ್ನು ಗೆಲ್ಲಿಸಿದ್ದಾರೆ.

ಇದು ನಮ್ಮ ಕುಟುಂಬದವರ ಜತೆಗೆ ಕ್ಷೇತ್ರದ ಜನತೆಯ ಗೆಲುವಾಗಿದೆ. ಕ್ಷೇತ್ರ ಪ್ರವೇಶ ಸಾಧ್ಯವಾಗದಿದ್ದರೂ ಜಿಲ್ಲೆಯ ಗಡಿಯಲ್ಲಿ ಕುಳಿತು ಕ್ಷೇತ್ರದ ಪ್ರತಿಯೊಬ್ಬರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಷಡ್ಯಂತ್ರ ನಡೆಸಿದವರಿಗೆ ನಮ್ಮ ಗೆಲುವು ದೊಡ್ಡ ಉತ್ತರ. ಜನತೆ ಬಹಳಷ್ಟು ವಿಶ್ವಾಸವಿಟ್ಟು, ಎಲ್ಲ ಕಷ್ಟಗಳಲ್ಲಿ ನಮ್ಮನ್ನು ಬೆಂಬಲಿಸಿದ್ದಾರೆ. ನಾವು ಸದಾ ಚಿರಋಣಿ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅವಿರತ ಶ್ರಮ ಹಾಕಲಾಗುವುದು. ಶಿವಲೀಲಾ ಕುಲಕರ್ಣಿ, ಶಾಸಕ ವಿನಯ ಕುಲಕರ್ಣಿ ಪತ್ನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net