

ತರೀಕೆರೆ: ಕೆರೆಹೊಸಳ್ಳಿಯಲ್ಲಿ ಶಿವಾಲಯದ ಪ್ರವೇಶೋತ್ಸವ, ಶ್ರೀ ಮಹಾ ಶಿವಲಿಂಗ, ಶ್ರೀ ನಂದೀಶ್ವರ ದೇವರ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧಾರ್ಮಿಕ ಕಾರ್ಯಕ್ರಮ ಗುರುವಾರ ನೆರವೇರಿಸಲಾಯಿತು.
ಆಲಯ ಶುದ್ಧಿ, ಬಿಂಬ ಶುದ್ಧಿ, ನಾಡಿ ಸಂಧಾನ, ಶಿವಲಿಂಗ ಪ್ರಾಣ ಪ್ರತಿಷ್ಠಾಪನೆ, ವಿಗ್ರಹಗಳಿಗೆ ನೇತ್ರೋನ್ಮಿಲನ ಇತರ ಸೇವೆ ನೆರವೇರಿಸಲಾಯಿತು.
ಕಳಸಾರೋಹಣದ ಜತೆ ದೇವರ ಪ್ರಾಣಪ್ರತಿಷ್ಠೆ ಹಲವು ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು. ಮುತ್ತೈದೆಯರು ಹೊತ್ತು ತಂದ 108 ಕುಂಭದಿಂದ ಶಿವನಿಗೆ ಅಭಿಷೇಕ ನಡೆಸಲಾಯಿತು. ಚಿಕ್ಕಮಗಳೂರು ಬಸವ ತತ್ವಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹಾಗೂ ಹುಣಸಘಟ್ಟ ಹಾಲು ಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಿವಾಲಯ ಪ್ರವೇಶೋತ್ಸವದ ನಿಮಿತ್ತ ಸಂಜೆ ಹುಲಿಕಲ್ ನಟರಾಜ್ ಅವರಿಂದ ನಂಬಿಕೆ-ಮೂಢ ನಂಬಿಕೆಗಳ ಕುರಿತು ಉಪನ್ಯಾಸ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಎಸ್.ಲಕ್ಷ್ಮೀ ಅವರಿಂದ ವಚನ ರೂಪಕ, ಪುಟಾಣಿ ಮಹನ್ಯಗುರು ಪಾಟೀಲ್ ಅವರಿಂದ ರಸ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶ್ರೀ ಬಸವೇಶ್ವರ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ರೇಣುಕಪ್ಪ, ಜಿಪಂ ಮಾಜಿ ಸದಸ್ಯ ಕೆ.ಆರ್.ಆನಂದಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಎನ್.ಬಿ.ಸುಧಾಕರ್, ದೇಗುಲ ನಿರ್ಮಾಣದ ಶಿಲ್ಪಿ ಶ್ರೀನಿವಾಸ್, ಗ್ರಾಮಸ್ಥರಾದ ಮಹಾಲಿಂಗಪ್ಪ, ಬಸಯ್ಯ, ಮಲ್ಲೇಶಪ್ಪ, ಬೈಲಪ್ಪ ಇತರರಿದ್ದರು.