

ನೆಲಮಂಗಲ: ಬಸವಾದಿಶರಣರ ಕಾಯಕ ತತ್ವ ಪರಿಚಯಿಸಿದ ಪರಮಪೂಜ್ಯ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ವಿಶ್ವರತ್ನ ಜಂಗಮ ಕೃತಿ ರಚನೆ ಮಾಡಿರುವುದು ಮಾದರಿ ಎನಿಸಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಕವಾಡಿಮಠದ ಶ್ರೀ ವೀರಭದ್ರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ‘ವಿಶ್ವರತ್ನ ಮಹಾಜಂಗಮ’ ಗ್ರಂಥಲೋಕಾರ್ಪಣೆ ಮತ್ತು ಶಿವತತ್ವ ಚಿಂತನ ಗೋಷ್ಠಿ ಸಮಾರಂಭದಲ್ಲಿ ಮಾತನಾಡಿದರು.
ಕಾಯಕ ನಿಷ್ಠೆಯನ್ನು ನಂಬಿ ಲಕ್ಷಾಂತರ ಮಂದಿಯ ಬಾಳಿಗೆ ಬೆಳಕಾದ ಡಾ.ಶಿವಕುಮಾರ ಸ್ವಾಮೀಜಿ ಅವರ ಕೊಡುಗೆ ಅಪಾರವಾಗಿದೆ. ಶ್ರೀಗಳ ಚಿಂತನೆ ಗ್ರಾಮೀಣ ಭಾಗದ ರೈತರು, ಬಡವರ ಮಕ್ಕಳ ಶೈಕ್ಷಣಿಕ ಪ್ರಗತಿಯಾಗಿತ್ತು. ಆದ್ದರಿಂದ ಲಕ್ಷಾಂತರ ಜನ ಮಠದಲ್ಲಿ ವಿದ್ಯಾಭ್ಯಾಸ ಪಡೆದು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿದಲೂರು ಸೋಮಣ್ಣ ಅವರು ಶ್ರೀಗಳ ಬಗ್ಗೆ ವಿಶ್ವರತ್ನ ಜಂಗಮ ಎಂಬ ಶೀರ್ಷಿಕೆಯಡಿ ಕೃತಿ ರಚನೆ ಮಾಡಿರುವುದು ಸಂತೋಷಕರ ಸಂಗತಿ. ಜತೆಗೆ ಶಿವನ ಸ್ಮರಣೆಯಿಂದ ಸಂಕಷ್ಟಗಳು ಪರಿಹಾರ ವಾಗುತ್ತದೆ. ಶಿವತತ್ವದ ಬಗ್ಗೆ ಪ್ರತಿಯೊಬ್ಬರ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸಕ್ಕೆ ಮುಂದಾಗಬೇಕು ಎಂದರು.
ಗದ್ದುಗೆ ಮಠದ ಶ್ರೀಮಹಾಂತ ಸ್ವಾಮೀಜಿ, ಹೊನ್ನಮ್ಮಗವಿಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಗಣ್ಣಯ ಮಠದ ಚನ್ನಬಸವ ಸ್ವಾಮೀಜಿ, ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ , ಬಂಡೆಮಠದ ಮಹಾಲಿಂಗ ಸ್ವಾಮೀಜಿ, ಕಾಲುವೆ ಮಠದ ಇಮ್ಮಡಿ ಶಿವರುದ್ರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ, ರುದ್ರೇಶ್ವರ ಸೊಸೈಟಿ ಅಧ್ಯಕ್ಷ ಎನ್.ಬಿ.ದಯಾಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಹರೀಶ್ ಆರಾಧ್ಯ, ಉದ್ಯಮಿ ಭವಾನಿಶಂಕರ್‌ಬೈರೇಗೌಡ, ಮಹಾಸಭಾ ರಾಜ್ಯ ಘಟಕದ ನಿರ್ದೇಶಕ ವಿರೂಪಾಕ್ಷಯ್ಯ, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಸಿ.ಪ್ರದೀಪ್, ಲೋಲಾಕ್ಷಿ ಗಂಗಾಧರ್, ಟೌನ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಚನ್ನಬಸವರಾಜು ಉಪಸ್ಥಿತರಿದ್ದರು.
ಪರರಲ್ಲಿ ಪರಮಾತ್ಮನನ್ನು ಕಾಣುವವನೇ ಗುರು, ಪರಿಪೂರ್ಣ ಜ್ಞಾನದ ಸಂಕೇತ ಜಂಗಮ, ಜ್ಞಾನ ಪ್ರಕಾಶದ ಸಂಕೇತ ವಿಭೂತಿ, ಜ್ಞಾನ ಸಾರ ಮೃಷ್ಠಿಯ ಸಂಕೇತ ರುದ್ರಾಕ್ಷಿ, ಭಕ್ತನ ನಾಮ ಸಂಕೇತ ಮಂತ್ರ, ಜ್ಞಾನ ಸಾರದ ಸಂಕೇತ ಪಾದೋದಕ, ಭಕ್ತ ಪಡೆಯುವ ಫಲವೇ ಪ್ರಸಾದವಾಗಿದೆ. ಅವರಲ್ಲಿರುವ ಭಕ್ತಿ ಮತ್ತು ಜ್ಞಾನದ ಅಪರಿಮಿತವಾದ ಜ್ಞಾನದ ಬೆಳಕು ನಮಗೆ ಕಾಣುತ್ತದೆ. -ಶಂಕರ ಮಹದೇವ ಬಿದರಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ