

ಮಂಡ್ಯ: ಹಸಿದರಿಗೆ ಅನ್ನಹಾಕುವುದೇ ದೊಡ್ಡ ಧರ್ಮ ಎಂಬುದು ಎಲ್ಲರಿಗೂ ಅರಿವಾಗಿದೆ. ನಡೆದಾಡಿದ ದೇವರು ಎಂದೇ ಭಕ್ತರ ಮನದಲ್ಲಿ ಉಳಿದಿರುವ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಜನ್ಮದಿನದಿಂದ ಸೇವಾ ಕಾರ್ಯ ಮಾಡುತ್ತಿರುವುದೇ ಪುಣ್ಯದ ಕಾರ್ಯ ಎಂದು ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವಸ್ವಾಮೀಜಿ ಹೇಳಿದರು.
ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಸಿದ್ದಗಂಗಾ ಶ್ರೀಗಳ ಉದ್ಯಾನದಲ್ಲಿ ಕಾಯಕಯೋಗಿ ಫೌಂಡೇಶನ್, ಸಿದ್ದಗಂಗಾ ಸೇವಾ ಸಮಿತಿ, ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ, ಜಿಲ್ಲಾ ಶರಣರ ಸಂಘಟನೆ, ಸಿದ್ದಗಂಗಾ ಬಳಗದ ಸಂಯುಕ್ತಾಶ್ರಯದಲ್ಲಿ ಭಾನುವಾರ ಪದ್ಮಭೂಷಣ, ಕರ್ನಾಟಕರತ್ನ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ 117ನೇ ಜನ್ಮದಿನೋತ್ಸವ ಅಂಗವಾಗಿ ಆಯೋಜಿಸಿದ್ದ ಅನ್ನದಾಸೋಹ, ರಕ್ತದಾನ ಶಿಬಿರ, ಕೃತಿ ಬಿಡುಗಡೆ, ಅಭಿನಂದನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಜನತೆಗೂ ಸಿದ್ದಗಂಗಾಮಠಕ್ಕೂ ಬಹಳ ಒಡನಾಟವಿದೆ. ಶ್ರೀಗಳ ಹೆಸರಿನಲ್ಲಿ ಉದ್ಯಾನವನ ನಿರ್ಮಿಸಿ, ಒಡನಾಡಿಗಳ ಸಹಕಾರದಲ್ಲಿ ಸೇವಾಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ನಾಡಿನ ಜನರ ಮತ್ತು ಶ್ರೀಮಠದ ಭಕ್ತದ ಆಶಯದಂತೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪುರಸ್ಕಾರ ಲಭ್ಯವಾಗಬೇಕಿತ್ತು. ಅವರೇ ವಿಶ್ವ ರತ್ನವಾಗಿ ಭಕ್ತಮಹಾಶಯಗಳ ಹೃದಯದಲ್ಲಿ ನೆಲೆಸಿದ್ದಾರೆ. ಯಾವ ರತ್ನ ಕೊಟ್ಟರೂ ಸಾಲದು, ಪುರಸ್ಕಾರಗಳಿಗೆ ಮಹತ್ವ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಮಳವಳ್ಳಿ ಧನಗೂರು ಮಠದ ಷಡಕ್ಷರಿ ದೇಶಿಕೇಂದ್ರ ಶಿವಾಚಾರ್ಯಸ್ವಾಮೀಜಿ ಮಾತನಾಡಿ, ಸಿದ್ದಗಂಗಾ ಶ್ರೀಗಳು ಕಾಯಕ, ದಾಸೋಹ ಮತ್ತು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ನಾಡಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಬಡಮಕ್ಕಳಿಗೆ ಅನ್ನ, ಆಶ್ರಯ ಮತ್ತು ಶಿಕ್ಷಣ ನೀಡ ನೀಡಿದ ಕೀರ್ತಿ ಸಲ್ಲಿಸುತ್ತದೆ. ಹಲವು ವರ್ಷದಿಂದ ಉದ್ಯಾನದಲ್ಲಿ ವಿವಿಧ ಸೇವಾಕಾರ್ಯಗಳು ನಡೆದುಕೊಂಡು ಬರುತ್ತಿವೆ. ಇದು ಮುಂದುವರೆಯಲಿ ಎಂದರು.
ಸಿದ್ದಗಂಗಾ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ್, ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ ಅಧ್ಯಕ್ಷ ಬೆಟ್ಟಹಳ್ಳಿ ಮಂಜುನಾಥ್, ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಡಾ.ವಚನಕುಮಾರಸ್ವಾಮಿ, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಜಿಲ್ಲಾ ಶರಣರ ಸಂಘಟನೆಯ ಸುರೇಶ್, ಕಾಡುಕೊತ್ತನಹಳ್ಳಿ ನಂದೀಶ್, ವಿಶ್ವನಾಥ್, ಮಹಂತೇಶಪ್ಪ, ಶಿವಲಿಂಗಪ್ಪ, ಮಹೇಶ್, ಎಲ್.ಸಂದೇಶ್, ಚಂದ್ರಹಾಸ್ ಇದ್ದರು.
ಇದೇ ಸಂದರ್ಭದಲ್ಲಿ ರೈತರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು. ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ನಡೆಯಿತು. ಬಳಿಕ ಸಹಸ್ರಾರು ಭಕ್ತರಿಗೆ ಅನ್ನದಾಸೋಹ ಆಯೋಜಿಸಲಾಗಿತ್ತು. ಮಳವಳ್ಳಿಯ ಸಿದ್ದಗಂಗಾ ಬಳಗದ ಅಧ್ಯಕ್ಷ ಸುರೇಶ್ ಹಾಗೂ ಪರಿಸರ ಪ್ರೇಮಿ ಕೃಷ್ಣಪ್ಪ ಅವರಿಗೆ ಸಿದ್ದಗಂಗಾಶ್ರೀ ಭಕ್ತಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.