

ಕಲಬುರಗಿ: ಮಠವನ್ನು ಕಟ್ಟಿ ಬೆಳೆಸುವಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಪಟ್ಟ ಶ್ರಮ, ಕಾಯಕ ಅಪಾರ. ಸ್ವಾಮೀಜಿಗಳೆಂದರೆ ಐಶಾರಾಮಿ ಜೀವನ ನಡೆಸುವವರೆಂದು ಟೀಕಿಸುವವರೇ ಹೆಚ್ಚು. ಆದರೆ ಶ್ರೀಗಳು ಮಠದಲ್ಲಿ ಹಿಡಿ ಅಕ್ಕಿ ಇಲ್ಲದಿದ್ದಾಗ ಜೋಳಿಗೆ ಹಾಕಿ ಭಿಕ್ಷೆ ಬೇಡಿ ಮಕ್ಕಳ ಹೊಟ್ಟೆ ತುಂಬಿಸಿದ ಶ್ರೇಷ್ಠರು. ಇದು ನಮ್ಮ ಪರಂಪರೆ ಎಂದು ಮಾದನಹಿಪ್ಪರಗಿಯ ಶ್ರೀ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ ನುಡಿದರು.
ನಗರದ ಪತ್ರಿಕಾ ಭವನದಲ್ಲಿ ಸಿದ್ಧಗಂಗಾದ ಹಳೇ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘ, ವೀರಶೈವ ಸಮಾಜದಿಂದ ಸೋಮವಾರ ಏರ್ಪಡಿಸಿದ್ದ ಸಿದ್ಧಗಂಗಾದ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿಗಳ ಗುರುವಂದನ ಮಹೋತ್ಸವದಲ್ಲಿ ಮಾತನಾಡಿ, ಮಠಗಳ ಉಚಿತ ಪ್ರಸಾದ ನಿಲಯದಲ್ಲಿದ್ದು ಅಧ್ಯಯನ ಮಾಡುವ ಮಕ್ಕಳು ಬಡವರಲ್ಲ. ಅವರೇ ಭಾಗ್ಯವಂತರು ಎಂದು ನುಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಮಠಗಳು ಸರ್ಕಾರ ಮಾಡದ ಕೆಲಸ ಮಾಡುತ್ತಿವೆ. ಸಮಾಜಕ್ಕೆ ಮಾರ್ಗದರ್ಶನದೊಂದಿಗೆ ಶೈಕ್ಷಣಿಕ ಕ್ರಾಂತಿ ಮಾಡಿ, ಜ್ಟಾನ ಬಿತ್ತಿವೆ. ಸಂಸ್ಕಾರ ನೀಡಿ ಸಂಸ್ಕೃತಿ ಉಳಿಸುತ್ತಿವೆ. ಕಾಯಕ ದಾಸೋಹ ತತ್ವವನ್ನು ಪಾಲಿಸಿ, ಅದರ ಮಹತ್ವ ಸಾರಿದ್ದು, ಸಿದ್ಧಗಂಗಾ ಮಠ ಎಂದು ಬಣ್ಣಿಸಿದರು.
ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲï ಮಾತನಾಡಿ, ಸಿದ್ಧಗಂಗಾ ಮಠ ದೇವನೊಬ್ಬ ನಾಮ ಹಲವು, ಕಾಯಕವೇ ಕೈಲಾಸ ತತ್ವವನ್ನು ಅನುಸರಿಸುತ್ತಿದೆ. ಗಡಿಯಾರವೇ ಅಚ್ಚರಿ ಪಡುವಂತೆ ಪೂಜ್ಯ ಶಿವಕುಮಾರ ಸ್ವಾಮೀಜಿಗಳು ಸದಾ ಲವಲವಿಕೆಯಿಂದ ಕಾರ್ಯಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಎಲ್ಲ ಜಾತಿ, ಧರ್ಮಗಳನ್ನು ಒಂದಾಗಿ ತೆಗೆದುಕೊಂಡು ಹೋಗುತ್ತಿದ್ದರು. ನನ್ನನ್ನು ಸೇರಿದಂತೆ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಪೂಜ್ಯರ ಋಣ ಯಾವುದೇ ಕಾರಣಕ್ಕೂ ತೀರಿಸಲು ಸಾಧ್ಯವಿಲ್ಲ. ಅವರ ಹೆಸರಿನಲ್ಲಿ ಅಲ್ಪ ಸೇವೆ ಮಾಡುವ ಸೌಭಾಗ್ಯ ನಮ್ಮದಾಗಲಿ ಎಂದು ಪ್ರಾರ್ಥಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಶಿಕ್ಷಣ ಮತ್ತು ದಾಸೋಹವನ್ನು ರೂಢಿಸಿಕೊಂಡಿದ್ದು ಮಠ ಮಾನ್ಯಗಳು. ಶಿವಕುಮಾರ ಶ್ರೀಗಳು ವಿಶ್ವ ರತ್ನವಾಗಿದ್ದಾರೆ. ದೈವಿ ಪುರುಷರಾಗಿದ್ದ ಅವರ ದರ್ಶನವೇ ನಮ್ಮಂತ ಸಾಮಾನ್ಯ ವ್ಯಕ್ತಿಗಳಲ್ಲಿ ಶಕ್ತಿ, ಸ್ಫೂರ್ತಿ ತುಂಬುತ್ತಿತ್ತು ಎಂದು ಹೇಳಿದರು.
ಪ್ರಮುಖರಾದ ಕಲ್ಯಾಣಪ್ಪ ಪಾಟೀಲ್, ಶ್ರೀಶೈಲ ಘೂಳಿ, ಅಶೋಕ ರಟಕಲ್, ರುದ್ರಮುನಿ ಪುರಾಣಿಕ, ಗುರುನಾಥ ದೇಸಾಯಿ, ಶಿವು ರಾಜೋಳಿ, ವೀರಯ್ಯ ಕನಕಪುರ, ಜಗದೀಶ ಹಲಕರ್ಟಿ ಇತರರಿದ್ದರು. ದೇವಿಂದ್ರಪ್ಪ ಅವಂಟಿ ಸ್ವಾಗತಿಸಿದರು. ಶ್ವೇತಾ ಜಿ. ದೇಸಾಯಿ ಪ್ರಾರ್ಥಿಸಿದರು. ಚನ್ನಬಸಯ್ಯ ಗುರುವಿನ ನಿರೂಪಣೆ ಮಾಡಿದರು.