ಏ. ೧೭ಕ್ಕೆ ಮಡಿಕೇರಿಗೆ ಡಿ.ಕೆ. ಶಿವಕುಮಾರ್

WhatsApp Image 2023-04-13 at 4.55.38 PM
Published on

ಮಡಿಕೇರಿ:

ಸೋಮವಾರ (ಏ.೧೭) ಮಡಿಕೇರಿ ಗಾಂಧಿ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಯಲಿದ್ದು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅದೇ ದಿನ ಮಧ್ಯಾಹ್ನ ೧೨ ರಿಂದ ೧ ಗಂಟೆ ಒಳಗೆ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ನಾಯಕರು, ಕಾರ್ಯಕರ್ತರು ಶ್ರಮಿಸಲು ಪಕ್ಷ ವ್ಯವಸ್ಥಿತವಾಗಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಬ್ಲಾಕ್‌ಗಳ ಬೂತ್ ಪದಾಧಿಕಾರಿಗಳಿಗೆ ಬ್ಲಾಕ್ ಮಟ್ಟದಲ್ಲಿ ತರಬೇತಿ ಕೊಡಲಾಗುತ್ತಿದೆ. ಏ. ೧೫ರಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತರಬೇತಿ ನಡೆಯಲಿದೆ. ಗೋಣಿಕೊಪ್ಪದಲ್ಲಿ ಬೆಳಗ್ಗೆ ೧೦.೩೦, ವಿರಾಜಪೇಟೆಯಲ್ಲಿ ಮಧ್ಯಾಹ್ನ ೧೧.೩೦ ಹಾಗೂ ಕಾರುಗಂದದಲ್ಲಿ ಮಧ್ಯಾಹ್ನ ೨.೩೦ಕ್ಕೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದ್ದು, ಪಕ್ಷದ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.

ಮಡಿಕೇರಿ ವಿಧಾಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏ. ೧೯ ರ ನಂತರ ಮಡಿಕೇರಿ, ಕುಶಾಲನಗರ ಹಾಗೂ ಸೋಮವಾರಪೇಟೆ ಬ್ಲಾಕ್‌ಗಳಲ್ಲಿ ತರಬೇತಿ ಏರ್ಪಡಿಸಲಾಗುವುದು. ಪ್ರಚಾರ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು ಮತದಾರರ ಮನೆ ಮನೆಗೆ ತೆರಳಿ ಆಂದೋಲನ ರೀತಿಯಲ್ಲಿ ಪ್ರಚಾರ ನಡೆಸಲು ಕೂಡ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದರು.

ಬಂಡಾಯ ಅಭ್ಯರ್ಥಿಗಳ ಮನವೊಲಿಸುವ ಕೆಲಸ ನಡೆದಿದೆ. ಇನ್ನು ಎರಡು ದಿನಗಳಲ್ಲಿ ಶುಭ ಸುದ್ದಿ ಸಿಗಲಿದೆ ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಮಾತನಾಡಿ ಏ.೧೮ರಂದು ಬೆಳಗ್ಗೆ ೧೧.೩೦ ಎ.ಎಸ್. ಪೊನ್ನಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ಅಂದೇ ವಿರಾಜಪೇಟೆಯಲ್ಲಿ ಪರಿಶಿಷ್ಟ ಜಾತಿ ವಿಭಾಗದ ಸಮಾವೇಶ ನಡೆಯಲಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು. ಕ್ಷೇತ್ರದ ಜನ ಕಣ್ಣೀರಿನಲ್ಲಿ ಇದ್ದಾರೆ. ಹಾಗಾಗಿ ನಮ್ಮ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದರು. ವಿರಾಜಪೇಟೆ ಕ್ಷೇತ್ರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಪಕ್ಷದ ಪ್ರಮುಖರಾದ ಕೊಲ್ಯದ ಗಿರೀಶ್, ಮೊಣ್ಣಂಡ ಶರೀನ್, ಹನೀಫ್ ಹಾಗೂ ದಿಲ್ಲು ಮತ್ರಂಡ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net