ಬಡ ವರ್ಗದವರ ಪರವಾದ ಕೆಲಸದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ: ಸಿಎಂ

Charaka hospital - 1
Published on

ಬೆಂಗಳೂರು: ಸಮಾಜದಲ್ಲಿ ಬಡವರು ಮತ್ತು ಕೆಳ ಮತ್ತು ಮಧ್ಯಮವರ್ಗದವರು ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದು, ಅವರಿಗೆ ಖಾಸಗಿ ಆಸ್ಪತ್ರೆ ಮಾದರಿಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ‘ಶಿವಾಜಿನಗರ ಚರಕ ಸೂಪಲ್ ಸ್ಪೆಷಾಲಿಟಿ ಆಸ್ಪತ್ರೆ’ ಸೇವೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಈ ಆಸ್ಪತ್ರೆಯೂ ಶಿವಾಜಿನಗರ ಭಾಗದ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲಿದೆ. ಖಾಸಗಿಯಲ್ಲಿ ಲಕ್ಷಗಟ್ಟಲೆ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕೆಲವೊಮ್ಮೆ ಸಂಬಂಧಿಕರ ಶವ ಪಡೆಯಲು ಕಷ್ಟ ಪಡುವ ಪರಿಸ್ಥಿತಿ ಇದೆ. ಹಾಗಾಗಿ ಅಂತಹ ಸ್ಥಿತಿ ತಪ್ಪಿಸಲು ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು 2016-17 ರಲ್ಲಿ ಮೈಸೂರು, ಗುಲಬರ್ಗಾ, ಬೆಳಗಾವಿ ಹಾಗೂ ಬೆಂಗಳೂರಿನ ಶಿವಾಜಿನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಅದರಂತೆ ಇಂದು ಆಸ್ಪತ್ರೆಗೆ ಸೇವೆಗೆ ಸಿದ್ಧವಾಗಿದೆ ಎಂದರು.

ಆಸ್ಪತ್ರೆಯ ಶುಚಿತ್ವ ಕಾಪಾಡಿ: ಸುಸಜ್ಜಿತವಾದ ಈ ಕಟ್ಟಡದಲ್ಲಿ ಶಸ ಚಿಕಿತ್ಸಾ ಕಟ್ಟಡ ಸೇರಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದೆ. ಆರಂಭದಿಂದಲೇ ಆಸ್ಪತ್ರೆಯಲ್ಲಿ ಶುಚಿತ್ವವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದು ಆಸ್ಪತ್ರೆಯ ಸಿಬ್ಬಂದಿ ಸಲಹೆ ನೀಡುವ ಮೂಲಕ ಸರ್ಕಾರಿ ಆಸ್ಪತ್ರೆ ಎಂದರೆ ಶುಚಿತ್ವ ಇಲ್ಲ ಎಂದ ಆರೋಪ ಬರದಂತೆ ಎಚ್ಚರ ವಹಿಸಲು ಸಲಹೆ ನೀಡಿದರು.

ಬಡವರ ಪರವಾದ ಕೆಲಸದಲ್ಲಿ ರಾಜೀ ಇಲ್ಲ: ಬಡವರ ಪರವಾದ ಕೆಲಸ ಮಾಡುವಲ್ಲಿ ಯಾವುದೇ ರಾಜೀ ಇಲ್ಲ. ಬಡವರಿಗೆ ಅಗತ್ಯ ಸೇವೆ ಒದಗಿಸುವುದು ಸರ್ಕಾರದ ಬದ್ಧತೆ. ಈ ಹಿಂದೆ ನಾನು ಸಿಎಂ ಆಗಿದ್ದಾಗ, ಅನ್ನಭಾಗ್ಯ, ಶಾದಿ ಭಾಗ್ಯ, ಶೂ ಭಾಗ್ಯ, ಇಂದಿರಾ ಕ್ಯಾಂಟೀನ್, ಮನಸ್ವಿನಿ ಸೇರಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಇದೀಗ ಯಾವುದೇ ಜಾತಿ ಧರ್ಮದ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ ಮುಖ್ಯವಾಹಿನಿಗಿ ಬರುವಂತಾಗಲು ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಇದಕ್ಕಾಗಿ 52009 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.

ಕಾಲೇಜು ಅಡಿಗಲ್ಲು ನಾನೇ ಹಾಕುವೆ: ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಇರಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿತ್ತು ಅದರಂತೆ ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆ ಒದಗಿಸುವ ಕೆಲಸ ಮಾಡಲಾಗಿದೆ. ಆ ಸಂದರ್ಭದಲ್ಲಿ ಕೈಗೊಂಡಿದ್ದ ಯೋಜನೆಗಳು ನಂತರದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದವು. ಅದೇ ರೀತಿ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಯೋಜನೆಗೆ ಮಂಜೂರಾತಿ ಸಹ ನನ್ನ ಅವಧಿಯಲ್ಲಿ ನೀಡಲಾಗಿತ್ತು. ಇದೀಗ ಆ ಯೋಜನೆಗೆ ನಾನೇ ಅಡಿಗಲ್ಲು ಹಾಕುವೆ ಎಂದರು.

ಬಿಜೆಪಿಗೆ ಸುಳ್ಳು ಹೇಳುವುದೇ ಕಾಯಕ: ಬಿಜೆಪಿಯವರು ಬಡವರಪರ ಕೆಲಸ ಮಾಡುವುದನ್ನು ಸಹಿಸುವುದಿಲ್ಲ. ಬಡವರು ಶಕ್ತಿವಂತರಾದರೆ, ಅವರ ಮೇಲೆ ಶೋಷಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಹಿಟ್ಲರ್ ಕಾಲದಲ್ಲಿ ಸುಳ್ಳು ಹೇಳಲೆಂದೇ ಒಬ್ಬ ಮಂತ್ರಿಯಿದ್ದಂತೆ, ಬಿಜೆಪಿಯವರು ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಸಾಮಾಜಿಕ ನ್ಯಾಯವನ್ನು ಕೇಳಬಾರದೆಂಬುದೇ ಪಟ್ಟಭದ್ರಹಿತಾಸಕ್ತಿಗಳ ಆಶಯವಾಗಿದೆ. ಜನರ ಆಶೀರ್ವಾದ ಇರುವವರೆಗೆ ಸಿದ್ದರಾಮಯ್ಯನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ ಆರೋಗ್ಯ ಮತ್ತು ಶಿಕ್ಷಣದ ಗ್ಯಾರಂಟಿಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಗ್ಯಾರಂಟಿಗಳನ್ನು ನೀಡಿದ್ದು ಚುನಾವಣೆಗಲ್ಲ. ಜನರ ಬದುಕಿನಲ್ಲಿ ಬದಲಾವಣೆ ತರಲು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ರಿಜ್ವಾನ್ ಅರ್ಷದ್, ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಚ್.ವಿ. ಮನೋಜ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net