ಮಹಾನ್ ಪರಾಕ್ರಮಿಯಾಗಿದ್ದ ಶಿವಾಜಿ - ಶ್ರೀ ಪ್ರಭು ಸ್ವಾಮೀಜಿ ಬಣ್ಣನೆ

20-SanduruP1
ಸಂಡೂರಿನ ಮರಾಠ ಸಮುದಾಯ ಭವನದಲ್ಲಿ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಶ್ರೀ ಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಮರಾಠ ಸಮಾಜದ ಅಧ್ಯಕ್ಷ ನಾರಾಯಣರಾವ್ ನಿಂಬಾಳ್ಕರ್, ಮಾಜಿ ಅಧ್ಯಕ್ಷ ಮಾರುತಿರಾವ್ ಬೋಸ್ಲೆ ಇತರರಿದ್ದರು.
Published on

ಸಂಡೂರು: ಕರ್ನಾಟಕ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಅಂತೆಯೇ ಮಹಾರಾಷ್ಟ್ರವೂ ಶಿವಾಜಿ ಮಹಾರಾಜರನ್ನು ಸಾಂಸ್ಕೃತಿಕ ರಾಯಭಾರಿಯಾಗಿಸಿ ಅದಕ್ಕಿಂತಲೂ ಮಿಗಿಲಾಗಿ ಕಾಣುತ್ತಿದೆ ಎಂದು ಶ್ರೀ ಪ್ರಭು ಸ್ವಾಮೀಜಿ ಹೇಳಿದರು.

ಪಟ್ಟಣದ ಮರಾಠ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ 398ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಯೋತಿರಾವ್ ಫುಲೆ ಅವರು ಛತ್ರಪತಿ ಶಿವಾಜಿಯ ಸಮಾಧಿಯನ್ನು ಹುಡುಕಿ ಅವರ ಜಯಂತಿಯನ್ನು ಮೊದಲು ಆಚರಿಸಿದರು ಎಂದರು.

ಭಾರತ ಕಂಡ ಹಲವು ಧೀಮಂತ ರಾಜರಲ್ಲಿ ಶಿವಾಜಿಯೂ ಒಬ್ಬರು. ಮಹಾನ್ ಪರಾಕ್ರಮಿ ಹಾಗೂ ಗೆರಿಲ್ಲಾ ತಂತ್ರಗಳ ಮೂಲಕ ವೈರಿಗಳನ್ನು ಸೆದೆ ಬಡಿದು, ಪರ್ವತಗಳನ್ನು ಕೋಟೆಯನ್ನಾಗಿ ಮಾಡಿಕೊಂಡ ಶೂರ. ಮರಾಠ ನಾಯಕರಲ್ಲಿ ಶಿವಾಜಿಯು ಎಂದಿಗೂ ಅಗ್ರಗಣ್ಯನಾಗಿದ್ದು, ಅವರನ್ನು ನೌಕಾಪಡೆಯ ಪಿತಾಮಹ ಎಂದು ಕರೆಯಲಾಗುತ್ತಿತ್ತು. ಶಿವಾಜಿಯು ಮೊಘಲ್ ಸಾಮ್ರಾಜ್ಯವನ್ನು ಮಣಿಸಿ, ಹಿಂದು ಸ್ವರಾಜ್ಯದ ಸ್ಥಾಪಕರೂ ಆಗಿದ್ದರು. ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕಾಗಿ ದಿಟ್ಟ ಹೋರಾಟ ನಡೆಸಿದ ಧೀರ ಎಂದು ಪ್ರಭು ಸ್ವಾಮೀಜಿ ತಿಳಿಸಿದರು.

ವಿನೋದ್ ಚೌಹಾಣ್ ಉಪನ್ಯಾಸ ನೀಡಿದರು. ಮರಾಠ ಸಮಾಜದಿಂದ ಆಯೋಜಿಸಲಾಗಿದ್ದ ಕ್ರೀಡೆಯಲ್ಲಿ ಜಯಿಸಿದವರಿಗೆ ಬಹುಮಾನ ವಿತರಿಸಲಾಯಿತು. ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಮರಾಠ ಸಮಾಜದ ಅಧ್ಯಕ್ಷ ನಾರಾಯಣರಾವ್ ನಿಂಬಾಳ್ಕರ್, ಉಪಾಧ್ಯಕ್ಷ ಹನುಮಂತರಾವ್, ಕಾರ್ಯದರ್ಶಿ ಮಾರುತಿ ರಾವ್, ಜಂಟಿ ಕಾರ್ಯದರ್ಶಿ ಶಿವಾಜಿರಾವ್ ಪವಾರ್, ಜೀಜಾಬಾಯಿ ಮಂಡಳಿ ಅಧ್ಯಕ್ಷೆ ಶಕುಂತಲಬಾಯಿ, ಮರಾಠ ಸಮಾಜದ ಮಾಜಿ ಅಧ್ಯಕ್ಷ ಮಾರುತಿರಾವ್ ಬೋಸ್ಲೆ, ಕುರುಬ ಸಮಾಜ ಅಧ್ಯಕ್ಷ ಸತ್ಯಪ್ಪ, ವಾಲ್ಮಿಕಿ ಸಮಾಜ ಅಧ್ಯಕ್ಷ ವದ್ದಟ್ಟಿ ಅಂಬರೀಷ್, ಉಪಾಧ್ಯಕ್ಷ ಚಂದ್ರು, ರಾಹುಲ್ ಘೋರ್ಪಡೆ, ಪರಶುರಾಮ, ಪುರಸಭೆ ಸದಸ್ಯರಾದ ಸಂತೋಷ್ ಜಾಧವ್, ಎಲ್.ಎಚ್.ಶಿವಕುಮಾರ್, ಕೆ.ವಿ.ಸುರೇಶ್, ದಲಿತ ಸೇನೆ ತಾಲೂಕು ಅಧ್ಯಕ್ಷ ರಾಜೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net