ಶಿವಾಜಿ ಸ್ಟ್ರೈಕರ್ಸ್‌ ತಾಳತ್ತಮನೆ ತಂಡ ಚಾಂಪಿಯನ್

3adarshkdga2
Published on

ಮಡಿಕೇರಿ: ಕೊಡಗು ಜಿಲ್ಲಾ ಅಂಭಾಭವಾನಿ ಯುವಕ, ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ತಾಳತ್ತಮನೆ ವತಿಯಿಂದ ಆಯೋಜಿಸಿದ್ದ ೮ನೇ ವಾರ್ಷಿಕ ಗ್ರಾಮೀಣ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾಟದಲ್ಲಿ ಶಿವಾಜಿ ಸ್ಟ್ರೈಕರ್ಸ್‌ ತಾಳತ್ತಮನೆ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪುರುಷರ ವಾಲಿಬಾಲ್‌ನ ಫೈನಲ್ ಪಂದ್ಯದಲ್ಲಿ ಶಿವಾಜಿ ಸ್ಟ್ರೈಕರ್ ತಾಳತ್ತಮನೆ ಮತ್ತು ಗೂಗ್ಲಿ ಬಾಯ್ಸ ಕಾನೂರು ತಂಡ ಪ್ರಶಸ್ತಿಗಾಗಿ ಸೆಣಸಾಟ ನಡೆಸಿತು. ಇತ್ತಂಡಗಳು ಸಮಬಲ ಪ್ರದರ್ಶನ ನೀಡಿ ಅಂತಿಮವಾಗಿ ೨೮-೩೦ ಅಂಕಗಳಿಂದ ಗೂಗ್ಲಿ ಬಾಯ್ಸ ತಂಡವನ್ನು ಮಣಿಸಿ ಶಿವಾಜಿ ಸ್ಟ್ರೈಕರ್ ತಾಳತ್ತಮನೆ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಗೂಗ್ಲಿ ಬಾಯ್ಸ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.


ಪಂದ್ಯಾಟದ ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಶಿವಾಜಿ ಸ್ಟ್ರೈಕರ್ ತಾಳತ್ತಮನೆ ತಂಡದ ಆದರ್ಶ ಅದ್ಕಲೇಗಾರ್, ಬೆಸ್ಟ್ ಸ್ಮೇಶರ್ ಪ್ರಶಸ್ತಿಯನ್ನು ಗೂಗ್ಲಿ ಬಾಯ್ಸ ತಂಡದ ಮೋಹನ್ ಪಡೆದುಕೊಂಡರು. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಯಿತು.
ಕಾಲೇರಿ ಚೆಂಬು ಚಾಂಪಿಯನ್: ಕಬಡ್ಡಿ ಪಂದ್ಯದಲ್ಲಿ ಕಲೇರಿ ಫ್ರೆಂಡ್ಸ್ ಕುದ್ರೆಪಾಯ ಮತ್ತು ಅಂಭಾಭವಾನಿ ಗುಡ್ಡೆಹೊಸೂರು ತಂಡ ಫೈನಲ್ ಪ್ರವೇಶಿಸಿತು. ರೋಚಕಥೆಯಿಂದ ಕೂಡಿದ್ದ ಪಂದ್ಯದಲ್ಲಿ ಕಲೇರಿ ಫ್ರೆಂಡ್ಸ್ ಕುದ್ರೆಪಾಯ ತಂಡ ೪೭-೮ ಅಂಕಗಳಿಂದ ಅಂಭಾಭವಾನಿ ಗುಡ್ಡೆಹೊಸೂರು ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಕಲೇರಿ ಫ್ರೆಂಡ್ಸ್ ಕುದ್ರೆಪಾಯ ತಂಡದ ತೀರ್ಥ ಪ್ರಸಾದ್ ಪಡೆದುಕೊಂಡರು. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಯಿತು.


ಮಹಿಳೆಯರ ಹಗ್ಗಜಗ್ಗಾಟದಲ್ಲಿ ಅಂಚಿ ಗರ್ಲ್ಸ್ ತಂಡ ಪ್ರಥಮ, ಗುಡ್ಡೆಹೊಸೂರು ಅಂಭಾಭವಾನಿ ತಂಡ ದ್ವಿತೀಯ, ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಭದ್ರಗೋಳ ತಂಡ ಪ್ರಥಮ, ಚೆಂಬು ಕಾಲೇರಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರ ವಿಭಾಗದ ಭಾರದ ಗುಂಡು ಎಸೆತ ಪಂದ್ಯದಲ್ಲಿ ಎಂ.ಎಸ್.ಗಣೇಶ್(ಪ್ರ), ಎಂ.ಆರ್.ಮೋಹನ(ದ್ವಿ) ಹಾಗೂ ದೀಪಕ್ ತೃತೀಯ ಬಹುಮಾನ ಪಡೆದುಕೊಂಡರು. ಮಹಿಳೆಯರ ಬಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಶ್ವೇತಾ(ಪ್ರ), ರೇಖಾ(ದ್ವಿ), ತುಳಸಿ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಗ್ರಾಮೀಣ ಪ್ರತಿಭೆ ಗುರುತಿಸಲು ಸಹಕಾರಿ: ಗ್ರಾಮೀಣ ಕ್ರೀಡಾಕೂಟ ಗ್ರಾಮೀಣ ಪ್ರತಿಭೆಯನ್ನು ಗುರುತಿಸಲು ಸಹಕಾರಿ ಎಂದು ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪರಮೇಶ್ವರ್ ಹೇಳಿದರು.
ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ಜನಾಂಗ ಬಾಂಧವರನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಗ್ರಾಮೀಣ ಕೂಟವನ್ನು ಆಯೋಜಿಸಲಾಗಿದೆ. ಇದು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಿದೆ. ಯುವಕರು ಯುವತಿಯರು ಸಂಘಟನಾತ್ಮಕವಾಗಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಸರ್ಕಾರ ಪರಿಶಿಷ್ಟ ಪಂಗಡದವರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾಭ್ಯಾಸದ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಇದನ್ನು ಫಲಾನುಭವಿಗಳು ಸದುಪಯೋಗಿಸಿಕೊಳ್ಳಬೇಕೆಂದರು.
ಕ್ರೀಡಾಕೂಟಕ್ಕೆ ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಎಂ.ಎಸ್.ಕಾಂತಿ ಚಾಲನೆ ನೀಡಿದರು. ಯುವಕ ಸಂಘದ ಕಾರ್ಯದರ್ಶಿ ಎಂ.ಡಿ.ಗುರುಪ್ರಸಾದ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಸಂಘದ ಸ್ಥಾಪನಾ ಕಾರ್ಯದರ್ಶಿ ಬಿ.ಎ.ಗಣೇಶ್, ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಎಂ.ಟಿ.ಗುರುವಪ್ಪ, ಉಪಾಧ್ಯಕ್ಷೆ ಜಿ.ಆರ್.ದೇವಕ್ಕಿ ನಾಯ್ಕ, ಅಂಭಾಭವಾನಿ ಯುವಕ, ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಆರ್.ಮೋಹನ್, ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಮಹಿಳಾ ಅಧ್ಯಕ್ಷೆ ರತ್ನಮಂಜರಿ, ಎಂ.ಟಿ.ಸುನಿತಾ, ವನಜಾಕ್ಷಿ ಉಪಸ್ಥಿತರಿದ್ದರು.

ವಿಜೇತರ ವಿವರ: ಮಹಿಳೆಯರ ವಿಭಾಗದ ಲೆಮನ್ ಅಂಡ್ ಸ್ಪೂನ್ ಸ್ಪರ್ಧೆಯಲ್ಲಿ ರತ್ನಮಂಜರಿ(ಪ್ರ), ಶಶಿಕಲಾ(ದ್ವಿ), ಜಲಜಾಕ್ಷಿ (ತೃ), ಯುವತಿಯರ ವಿಭಾಗದಲ್ಲಿ ದೀಪಿಕಾ(ಪ್ರ), ಶಾರದಾ(ದ್ವಿ), ಸ್ವಾತಿ(ತೃ) ಸ್ಥಾನ ಪಡೆದರು. ಸೂಜಿಗೆ ನೂಲು ಹಾಕುವ ಸ್ಪರ್ಧೆಯಲ್ಲಿ ಜಲಜಾಕ್ಷಿ(ಪ್ರ), ರೇಖಾ(ದ್ವಿ), ರಾಧ ತೃತೀಯ ಸ್ಥಾನ ಪಡೆದುಕೊಂಡರು. ಗೋಣಿ ಚೀಲ ಓಟದ ಮಹಿಳೆಯರ ವಿಭಾಗದಲ್ಲಿ ಪ್ರೇಮ(ಪ್ರ), ಹೂವಮ್ಮ(ದ್ವಿ), ರೇಖಾ(ತೃ), ಪುರುಷರ ವಿಭಾಗದಲ್ಲಿ ಆದರ್ಶ್ ಅದ್ಕಲೇಗಾರ್(ಪ್ರ), ದೀಪಕ್(ದ್ವಿ), ಎಂ.ಆರ್.ಮೋಹನ್(ತೃ), ವೇಗದ ನಡಿಗೆ ಸ್ಪರ್ಧೆಯಲ್ಲಿ ರಾಧಾಕೃಷ್ಣ(ಪ್ರ), ತಿಮ್ಮಯ್ಯ(ದ್ವಿ), ಐತ್ತಪ್ಪ ತೃತೀಯ ಬಹುಮಾನ ಪಡೆದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾಕೂಟದ ಎಲ್ಲಾ ಸ್ಪರ್ಧೆಗಳನ್ನು ತೀರ್ಪುಗಾರರಾದ ರಮೇಶ್, ಮಂಜುನಾಥ್ ಹಾಗೂ ರಘು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net