

ಬೀಳಗಿ: ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಬಾಗಲಕೋಟೆಯಲ್ಲಿ ಸ್ಥಾಪಿಸಲು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳ ಮತ್ತು ಹಿಂದು ಜಾಗರಣ ವೇದಿಕೆ ಹಾಗೂ ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದ ಗ್ರೇಡ್-2 ತಹಸೀಲ್ದಾರ್ ಆನಂದ ಕೋಲ್ಹಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವ ಹಿಂದು ಪರಿಷತ್, ಬಜರಂಗ ದಳ, ಹಿಂದು ಜಾಗರಣೆ ವೇದಿಕೆ ಬೆಳಗಾವಿ ಉತ್ತರ ಪ್ರಾಂತ ವಕ್ತಾರ ಪುಂಡಲೀಕ ದಳವಾಯಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಏನು ಎಂಬುದು ನಮ್ಮ ದೇಶದ ಜನತೆಗೆ ಗೊತ್ತು. ಅವರ ಪ್ರತಿಮೆ ಸ್ಥಾಪನೆಗೆ ಕಾಣದ ಕೈಗಳ ಕುಮ್ಮಕ್ಕುನಿಂದ ಜಿಲ್ಲಾಡಳಿತ ವಿರೋಧ ಮಾಡುವುದು ಸರಿಯಲ್ಲ. ಜಿಲ್ಲಾಡಳಿತ ಈ ಪ್ರತಿಮೆ ಮತ್ತು ಸ್ಥಳದ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಿ ಅಸಹಕಾರ ಮಾಡುವುದರ ಮೂಲಕ ಪ್ರತಿಮೆ ಸ್ಥಾಪನೆಗೆ ಅಡ್ಡಿಪಡಿಸುತ್ತಿರುವುದು ಸಮಸ್ತ ಹಿಂದುಗಳ ಭಾವನೆಗೆ ಧಕ್ಕೆಯಾಗುತ್ತಿದೆ. ವಿವಿಧ ಇಲಾಖೆಗಳ ನಿರಾಪೇಕ್ಷಣೆ ನಂತರವೂ ಈ ಹಂತದಲ್ಲಿ ಪ್ರತಿಮೆ ಸ್ಥಾಪನೆಯ ವಿಷಯದಲ್ಲಿ ನಿಯಮಗಳ ಹೆಸರಲ್ಲಿ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವುದನ್ನು ಸಮಸ್ತ ಹಿಂದು ಸಮಾಜ ಖಂಡಿಸುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಜಿಲ್ಲಾಡಳಿತ ತಡೆಮಾಡಿದ್ದು ಖಂಡನೀಯ. ಸರ್ಕಾರ ಹಾಗೂ ಜಿಲ್ಲಾಡಳಿತ ಶಿವಾಜಿ ಮಹಾರಾಜರ ಕೊಡುಗೆ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಅವ್ಯವಸ್ಥೆ ಧೋರಣೆ ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಹಿಂದು ಜಾಗರಣ ವೇದಿಕೆ ಮುಖ್ಯಸ್ಥ ವಿಶ್ವನಾಥ ಕುಂಟೋಜಿ ಮಾತನಾಡಿದರು. ಜಿಪಂ ಮಾಜಿ ಸದಸ್ಯರಾದ ಬಸವರಾಜ ಖೋತ, ಮೋಹನ ಜಾಧವ, ಹಿರಿಯರಾದ ಮಲ್ಲಪ್ಪ ಶಂಬೋಜಿ, ಬಸವರಾಜ ಉಮಚಗಿಮಠ, ಎಪಿಎಂಸಿ ಮಾಜಿ ಸದಸ್ಯ ರಾಮಣ್ಣ ಕಾಳಪ್ಪಗೋಳ, ಕಿರಣ ಬಡಿಗೇರ, ಪಪಂ ಸದಸ್ಯ ಸಿದ್ದು ಮಾದರ, ಮುತ್ತು ಬೋರ್ಜಿ, ರವಿ ಚವ್ಹಾಣ, ಮಲ್ಲಯ್ಯ ಸುರಗಿಮಠ, ರಾಮಚಂದ್ರ ನಲವಾಡೆ, ರಾಮಣ್ಷ ಕಣಿ, ಅನೀಲ ಗೋಕಾಕ ಇತರರಿದ್ದರು.