

ಬಾಗಲಕೋಟೆ: ಮೂರು ದಿನಗಳ ಹಿಂದೆ ಯಾರೋ ಅನಾಮಿಕರು ರಾತ್ರೋ ರಾತ್ರಿ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಹೋಗಿರುವ ಘಟನೆ ಇದೀಗ ಬಾಗಲಕೋಟೆ ನಗರದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಬಾಗಲಕೋಟೆ ನಗರದ ಸೋನಾರ ಬಡಾವಣೆಯ ಪ್ಲಾಟ್ ನಂಬರ್ 3ರಲ್ಲಿ ಆ. 13 ಹಾಗೂ 14 ಮಧ್ಯರಾತ್ರಿ ಯಾರೋ ಶಿವಾಜಿ ಮಹಾರಾಜದ ಅಶ್ವಾರೂಢ ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದು, ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.
ಅನಧಿಕೃತವಾಗಿ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಇದೀಗ ಜಿಲ್ಲಾಡಳಿತ ಮೂರ್ತಿ ತೆರವಿಗೆ ಮುಂದಾಗಿದ್ದು, ಬುಧವಾರ ರಾತ್ರಿ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮುಂಜಾಗ್ರತೆ ಕ್ರಮವಾಗಿ ಸಂಜೆಯೇ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದ ಪೊಲೀಸರು, ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಿದ್ದಾರೆ.
ಮೂರ್ತಿ ತೆರವುಗೊಳಿಸುವುದನ್ನು ವಿರೋಧಿಸಿ ಬಿಜೆಪಿ ಹಾಗೂ ಹಿಂದು ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ನಗರದಲ್ಲಿ ಬುಧವಾರ ಸಂಜೆಯಿಂದಲೇ ಆ.18 ರ ಮಧ್ಯರಾತ್ರಿ 12 ಗಂಟೆ ವರೆಗೂ 144 ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಆದರೆ, ಸ್ಥಳದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಮೂರು ಡಿಎಆರ್, ಒಂದು ಕೆಎಸ್‌ಆರ್‌ಪಿ ತುಕುಡಿ, ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು, ಎಸ್ಪಿ ಜಯಪ್ರಕಾಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ. ಮತ್ತೊಂದೆಡೆ ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ ವಿಕಾಸ್ ಸಹ ಬಾಗಲಕೋಟೆಗೆ ಆಗಮಿಸಿದ್ದಾರೆ.
ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಸ್ಥಳದಲ್ಲಿ ಗುಂಪು ಗುಂಪಾಗಿ ಇರದಂತೆ ಪ್ರತಿಭಟನಾಕಾರರನ್ನು ಸ್ಥಳದಿಂದ ನಿರ್ಗಮಿಸುವಂತೆ ಮಾಡಲು ಎಸ್ಪಿ ಜಯಪ್ರಕಾಶ್ ಖಡಕ್ ಸೂಚನೆ ಕೊಡುತ್ತಿದ್ದಾರೆ. ಆದರೆ, ಸ್ಥಳ ಬಿಟ್ಟು ಹೋಗಲು ಪ್ರತಿಭಟನಾಕಾರರು ಒಪ್ಪದ ಹಿನ್ನೆಲೆಯಲ್ಲಿ ಎಸ್ಪಿ ಅವರೊಂದಿಗೆ ಪ್ರತಿಭಟನಾಕಾರರ ವಾಗ್ವಾದ ನಡೆಯಿತು. ಪ್ರತಿಭಟನಾಕಾರರು ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಎಂಎಲ್ಸಿ ನಾರಾಯಣಸಾ ಭಾಂಡಗೆ ಅವರ ಮೇಲೆ ಎಸ್ಪಿ ಗರಂ ಸಹ ಆಗಿದ್ದರು. ರಾತ್ರಿ 9 ಗಂಟೆವರೆಗೂ ಮೂರ್ತಿ ತೆರವು ಮಾಡಿರಲಿಲ್ಲ.
=======
ಏನಿದು ವಿವಾದ…?: ಬಾಗಲಕೋಟೆಯಿಂದ ಜಿಲ್ಲಾಡಳಿತ ಭವನಕ್ಕೆ ತೆರವು ಮಾರ್ಗ ಮಧ್ಯೆ ಸೋನಾರ ಬಡಾವಣೆಯ ಪ್ಲಾಟ್ ನಂಬರ್ 3 ರಲ್ಲಿ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಮಾಡಲು ಈ ಹಿಂದೆ ಸಮಿತಿಯವರು ನಿರ್ಧಾರ ಮಾಡಿದ್ದರು. ಈ ಬಗ್ಗೆ ನಗರಸಭೆ ಆಡಳಿತ ಠರಾವು ಪಾಸು ಮಾಡಿತ್ತು. 18 ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದ ವೇಳೆಯೇ ಜಾಗದ ವಿಚಾರದಲ್ಲಿ ಮತ್ತೊಂದು ಬಣ ತಕರಾರು ವ್ಯಕ್ತಪಡಿಸಿತ್ತು. ಕಾಯ್ದೆ ಕಾನೂನು ಎಂದಾಗ ಮೂರ್ತಿ ಪ್ರತಿಷ್ಠಾಪನೆ ತಾತ್ಕಾಲಿಕವಾಗಿ ಕೈಬಿಡಲಾಗಿತ್ತು. ಆದರೆ, ಆ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಬೇಕಾದ ಮಂಟಪ ನಿರ್ಮಾಣ ಸಹ ಮಾಡಲಾಗಿತ್ತು.
ಏತನ್ಮಧ್ಯೆ ಮೂರು ದಿನಗಳ ಹಿಂದೆ ಯಾರೋ ಆ ಮಂಟಪದಲ್ಲಿ ಬೇರೊಂದು ಐದಾರು ಆಡಿ ಎತ್ತರದ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಹೋಗಿದ್ದರು. ಅದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮೂರ್ತಿ ಪ್ರತಿಷ್ಠಾಪನೆಗೆ ನಗರಸಭೆ ವತಿಯಿಂದ ಅನುಮತಿ ಪಡೆದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ಹಿಂದು ಸಂಘಟನೆ, ಬಿಜೆಪಿ ಮುಖಂಡರು ಮಾತ್ರ ಎಲ್ಲ ಪರವಾನಗಿ ಪಡೆದಿದ್ದೇವೆ. ಈಗ ಪ್ರತಿಷ್ಠಾಪನೆ ಮಾಡಿರುವ ಮೂರ್ತಿ ತೆರವು ಮಾಡದಂತೆ ಆಗ್ರಹಿಸಿದ್ದಾರೆ.
ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ ?:
ಯಾರೋ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದನ್ನು ಬಿಜೆಪಿ ಹಾಗೂ ಹಿಂದು ಪರ ಸಂಘಟನೆ ಕಾರ್ಯಕರ್ತರು ಸ್ವಾಗತಿಸಿದ್ದು, ಶಿವಾಜಿ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಅಖಂಡ ಹಿಂದು ಧರ್ಮಕ್ಕಾಗಿ ಶ್ರಮಿಸಿದವರು. ಅಂತ ಮಹಾಪುರುಷರ ಪುತ್ಥಳಿಯನ್ನು ಯಾವುದೇ ಕಾರಣಕ್ಕೂ ತೆರವಿಗೆ ಮುಂದಾಗಬಾರದು. ಈ ಜಾಗದಲ್ಲೇ ಪ್ರತಿಷ್ಠಾಪನೆ ಮಾಡಲು ಎಲ್ಲ ಸಿದ್ಧತೆ ಆಗಿತ್ತು. ಆದರೆ, ಕೆಲವರು ಅನಗತ್ಯವಾಗಿ ತಕರಾರು ಆಗಿದ್ದರಿಂದ ಅದು ವಿಳಂಬವಾಗಿತ್ತು. ಇದೀಗ ಯಾರೋ ಶಿವಾಜಿ ಅಭಿಮಾನಿಗಳು ಪ್ರತಿಷ್ಠಾಪನೆ ಮಾಡಿದ್ದು, ಆದಷ್ಟು ಬೇಗ ಈ ಜಾಗದಲ್ಲೆ 18 ಅಡಿ ಪ್ರತಿಮೆ ಅನಾವರಣ ಮಾಡಲಿದ್ದೇವೆ. ತೆರವುಗೊಳಿಸಿ ನಮ್ಮ ಭಾವನೆಗೆ ಧಕ್ಕೆ ಉಂಟು ಮಾಡಿದರೆ ಮುಂದಾಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಎಚ್ಚರಿಸಿದ್ದಾರೆ. ಇದೇ ವಿಚಾರವಾಗಿ ಬುಧವಾರ ಮಧ್ಯಾಹ್ನ ನಗರಸಭೆಯ ಎಲ್ಲ ಬಿಜೆಪಿ ಸದಸ್ಯರು ಹಾಗೂ ಹಿಂದು ಸಂಘಟನೆ ಮುಖಂಡರ ಜತೆ ತೆರಳಿ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.
ಪ್ರತಿಭಟನಕಾರರ ವಶಕ್ಕೆ ಪಡೆದ ಪೊಲೀಸರು: 144 ನಿಷೇಧಾಜ್ಞೆಯ ನಡುವೆಯೂ ಮೂರ್ತಿ ತೆರವುಗೊಳಿಸದಂತೆ ಆಗ್ರಹಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಹಾಗೂ ಹಿಂದು ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ರಾತ್ರಿ 9 ಗಂಟೆ ಹೊತ್ತಿಗೆ ವಶಕ್ಕೆ ಪಡೆದರು.
ಮಾಜಿ ಎಂಎಲ್ಸಿ ನಾರಾಯಣಾಸಾ ಭಾಂಡಗೆ, ಬಿಜೆಪಿ ಮುಖಂಡ ಬಸವರಾಜ ಯಂಕಂಚಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್ ಇತರ ಮುಖಂಡರನ್ನು ವಶಕ್ಕೆ ಪಡೆದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕರೆದುಕೊಂಡು ಹೋದರು.
ಉಸ್ತುವಾರಿ ಸಚಿವರಿಗೆ ಗಮನಕ್ಕಿಲ್ಲವಂತೆ:ಬಾಗಲಕೋಟೆ ನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಮಾಡಿರುವುದು, ನಂತರ ನಡೆದಿರುವ ಬೆಳವಣಿಗೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಗಮನಕ್ಕೆ ಇಲ್ಲವಂತೆ!
ಹೌದು, ಬುಧವಾರ ತಾವು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಬಗ್ಗೆ ಸಚಿವರನ್ನು ಪ್ರಶ್ನಿಸಿದಾಗ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ. ಆದರೆ, ಎಲ್ಲರೂ ದೇಶದ ಕಾನೂನಿಗೆ ಗೌರವ ಕೊಡಬೇಕು. ಕಾನೂನು ಪ್ರಕಾರವೇ ಎಲ್ಲವೂ ನಡೆಯಬೇಕು. ಸರ್ಕಾರ ಕಾನೂನಾತ್ಮಕ ಕೆಲಸ ಮಾಡಬೇಕಾಗುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿಯಲ್ಲಿ ನಾವು ಏನಾದರೂ ಮಾಡಬೇಕಾದರೆ ಅದಕ್ಕೆ ಪರವಾನಗಿ ಇರಬೇಕು. ಪರವಾನಗಿ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನಾವೆಲ್ಲರೂ ಕಾನೂನಿನ ಚೌಕಟ್ಟಿನಲ್ಲೆ ಇರಬೇಕಾಗುತ್ತದೆ. ನಾವೇ ಮಾಡಿಕೊಂಡಿರುವ ಕಾನೂನು ನಾವು ಪಾಲಿಸಬೇಕು ಎಂದರು.