

ನ್ಯಾಮತಿ: ಶಿವಾಜಿ ಮಹಾರಾಜರ ತತ್ವ ಆದರ್ಶ ಗುಣಗಳು ಎಂದಿಗೂ ಅಜರಾಮರ. ಅವರ ತತ್ವ ಆದರ್ಶ ಗುಣಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎಚ್.ಬಿ. ಗೋವಿಂದಪ್ಪ ಹೇಳಿದರು.
ಪಟ್ಟಣದ ತಾಲೂಕು ದಂಡಾಧಿಕಾರಿ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ಭಾವಸಾರ ಕ್ಷತ್ರಿಯ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದು ಸಾಮ್ರಾಜ್ಯವನ್ನು ನಿರ್ಮಾಣ ಮಾಡುವ ಜತೆಯಲ್ಲಿ ಸ್ವಾಭಿಮಾನಿ ರಾಷ್ಟ್ರ ನಿರ್ವಣಕ್ಕೆ ಹೋರಾಡಿ ಹಿಂದುಸ್ಥಾನವನ್ನು ಒಗ್ಗೂಡಿಸಲು ಶ್ರಮಿಸಿದವರು ಅಲ್ಲದೆ ಅಪ್ಪಟ ದೇಶಭಕ್ತರಾಗಿದ್ದರು ಎಂದರು.
ಭಾವಸಾರ ಕ್ಷತ್ರಿಯ ಸಮಾಜದ ಮುಖಂಡ ಶ್ಯಾಮ್ ಸುಂದರ್ ಮಾತನಾಡಿ, ಮರಾಠ ಒಳ ಪಂಗಡಗಳು ಒಗ್ಗೂಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬಹುದಾಗಿದೆ ಎಂದರು.
ಹನುಮಂತರಾವ್ ಮಾತನಾಡಿ, ಮರಾಠ ಹಾಗೂ ಹಿಂದೂ ಸಮಾಜದ ಧ್ವನಿಯಾಗಿ ಹೋರಾಡಿದ ಶಿವಾಜಿ ಅವರು ಯುವ ಪೀಳಿಗೆಗೆ ದಾರಿ ದೀಪವಾಗಿದ್ದಾರೆ, ಯುವಕರು ಅವರ ದೇಶಭಕ್ತಿಯನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್, ತಾಲೂಕು ಗೃಹರಕ್ಷಕ ದಳದ ಪ್ಲಟೂನ್ ಕಮಾಂಡರ್ ರಾಘವೇಂದ್ರ ಮೂಳೇಕರ್ ಮಾತನಾಡಿದರು.
ನಾಮದೇವ ಸಿಂಪಿ ಸಮಾಜದ ಜ್ಞಾನೋಬರಾವ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಎಂ.ಪಿ. ರಾಜಾರಾಮ್ ವಿಜಯೇಂದ್ರ ಮಹೇಂದ್ರಕರ್, ನಾಗರಾಜ್, ಶಿರಸ್ತೇದಾರ್ ಎಂ.ಎಚ್. ಕೆಂಚಮ್ಮ, ಸೌಮ್ಯ, ಉಪ ತಹಸೀಲ್ದಾರ್ ನಂದ್ಯಪ್ಪ ಇತರರು ಇದ್ದರು.