ಶಿವಾಜಿ ಮಹಾರಾಜರ ಜಯಂತಿ ನಾಳೆ

17 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಮರಾಠಾ ವಿದ್ಯಾಪ್ರಸಾರಕ ಮಂಡಳ ವತಿಯಿಂದ ಫೆ. 19ರಂದು ಮಂಡಳದ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಏರ್ಪಡಿಸಲಾಗಿದೆ ಎಂದು ಮಂಡಳದ ಅಧ್ಯಕ್ಷ ಮನೋಹರ ಮೋರೆ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಾಜಿ ಜಯಂತಿ ನಿಮಿತ್ತ ಈಗಾಗಲೇ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಕ್ತದಾನ ಶಿಬಿರ, ರಂಗೋಲಿ ಸ್ಪರ್ಧೆ ನಡೆಸಲಾಗಿದೆ. ಫೆ. 19ರಂದು ಆರೋಗ್ಯ ಶಿಬಿರ, ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಫೆ. 19ರಂದು ಬೆಳಗ್ಗೆ 6 ಗಂಟೆಗೆ ಮಹಾಲಕ್ಷ್ಮೀ ಹೋಮ, 8.30ಕ್ಕೆ ಮಂಡಳ ಆವರಣದಲ್ಲಿ ಭಗವಾ ಧ್ವಜಾರೋಹಣ, ಬೆಳಗ್ಗೆ 9 ಗಂಟೆಗೆ ಶಿವಾಜಿ ವೃತ್ತದಲ್ಲಿನ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ, ಬೆಳಗ್ಗೆ 9.30ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಂಡಳ ಕಾರ್ಯಾಧ್ಯಕ್ಷ ಸುಭಾಷ ಶಿಂಧೆ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದರು.

ಗೌರವ ಕಾರ್ಯದರ್ಶಿ ರಾಜು ಬಿರಜೆನವರ ಮಾತನಾಡಿ, ಬೆಳಗ್ಗೆ 10 ಗಂಟೆಗೆ ಬಾಲ ಶಿವಾಜಿ ನಾಮಕರಣ, ತೊಟ್ಟಿಲೋತ್ಸವ, 10.30ಕ್ಕೆ ಶಾಸಕರಾದ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ ಮತ್ತು ಮಹಾನಗರ ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ, ಶಂಕರ ಶೇಳಕೆ, ಡಾ.ಮಯೂರ ಮೋರೆ ಅವರಿಂದ ಶಿವಾಜಿ ಮಹಾರಾಜರ ಕೋಟೆಗಳ ಭಾವಚಿತ್ರ ಅನಾವರಣಗೊಳ್ಳಲಿದೆ ಎಂದರು.

11 ಗಂಟೆಗೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮರಾಠಾ ಮಂಡಳ ಆವರಣದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಉದ್ಘಾಟಿಸುವರು. ಅತಿಥಿಗಳಾಗಿ ಶಾಸಕರು, ವಿಧಾನ ಪರಿಷತ್​ ಸದಸ್ಯರು ಆಗಮಿಸುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ಮಧ್ಯಾಹ್ನ 3 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಗೆ ಸಚಿವ ಸಂತೋಷ ಲಾಡ್​ ಚಾಲನೆ ನೀಡುವರು. ರೀಗಲ್​ ವೃತ್ತ, ಮಣಕಿಲ್ಲಾ, ಹೆಬ್ಬಳ್ಳಿ ಅಗಸಿ, ಗಾಂಧಿ ಚೌಕ್​, ಸುಭಾಷ ರಸ್ತೆ, ವಿಜಯ ರಸ್ತೆಗಳಲ್ಲಿ ಸಂಚರಿಸಿ ಮರಾಠಾ ವಿದ್ಯಾ ಪ್ರಸಾರಕ ಮಂಡಳಿ ಬಳಿ ಸಂಪನ್ನಗೊಳ್ಳಲಿದೆ ಎಂದರು.

ಸುಭಾಷ ಶಿಂಧೆ, ಮಲ್ಲೇಶಪ್ಪ ಶಿಂಧೆ, ಸುಭಾಷ ಪವಾರ, ರಾಜು ಕಾಳೆ, ದತ್ತಾತ್ರೇಯ ಮೋಟೆ, ಈಶ್ವರ ಪಾಟೀಲ, ಶಿವಾಜಿ ಸೂರ್ಯವಂಶಿ, ಅನೀಲ ಭೋಸಲೆ, ಮಹೇಶ ಶಿಂಧೆ, ಪುರುಷೋತ್ತಮ ಜಾಧವ, ಸುನೀಲ ಮೊರೆ, ಪ್ರಸಾದ ಹಂಗಳಕಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net