ಎದೆಗುಂದದೆ ಮಕ್ಕಳನ್ನು ಸೈನ್ಯಕ್ಕೆ ಸೇರಿಸಿ: ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಸಲಹೆ

Shivaji Maharaj Jayanti Mandya
Published on

ಮಂಡ್ಯ: ಕ್ಷತ್ರಿಯ ಸಮಾಜದವರು ವೀರಾಸೇನಾನಿಗಳಾಗಿದ್ದು, ತಮ್ಮ ಮಕ್ಕಳನ್ನು ದೇಶಪ್ರೇಮ ಮೆರೆಯುವ ಸೈನಿಕರನ್ನಾಗಿಸಿ ಎಂದು ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಘಟಕದಿಂದ ಆಯೋಜಿಸಿದ್ದ 398ನೇ ವರ್ಷದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜ ದೊಡ್ಡ ಸೇನಾನಿ, ದೇಶಪ್ರೇಮಿ ಹಾಗೂ ಹಿಂದು ಧರ್ಮ ರಕ್ಷಕರಾಗಿದ್ದರು ಎಂದರು.

ಮರಾಠ ಜನಾಂಗವು ಮುಕ್ತವಾಗಿ ದೇಶ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಇರುತ್ತಾರೆ. ಯಾವುದೇ ಊರಿಗೋದರೂ ಒಬ್ಬ ಮಾಜಿ ಸೈನಿಕರು, ಕರ್ನಲ್‌ಗಳನ್ನು ನೋಡಬಹುದಿತ್ತು. ದೇಶಪ್ರೇಮದ ವಿಚಾರದಲ್ಲಿ ಎಂದಿಗೂ ಮರಾಠ ಜನಾಂಗ ಹಿಂದೆ ಬಿದ್ದಿಲ್ಲ. ದೇಶ ರಕ್ಷಣೆ ರಕ್ತದಲ್ಲಿಯೇ ಬಂದಿದೆ. ನಮ್ಮ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದಾರೆ. ಮನೆಗೊಬ್ಬ ಸೈನಿಕನಾಗಲಿ. ಆದ್ದರಿಂದ ತಾಯಂದಿರು ಹಿಂದೆ ಸರಿಯಬೇಡಿ. ಎದೆಗುಂದದೆ ಸೈನಿಕ ವೃತ್ತಿಗೆ ಮಕ್ಕಳನ್ನು ಸೇರಿಸಿ ಎಂದು ಹೇಳಿದರು.

ಭಾರತೀಯ ಸೈನ್ಯದಲ್ಲಿ 19 ಲಕ್ಷ ಜನರಿದ್ದಾರೆ. ನಮ್ಮ ಸೈನಿಕರು ಬಲಶಾಲಿಗಳು. ನಾಲ್ಕು ಜನ ಪಾಕಿಸ್ತಾನ ಹಾಗೂ ಚೀನಾದ ಸೈನಿಕರನ್ನು ನಮ್ಮ ಭಾರತದ ಒರ್ವ ಸೈನಿಕ ಎದುರಿಸುತ್ತಾರೆ. ಸೈನಿಕ ವೃತ್ತಿಗೆ ಹೋದವರೆಲ್ಲ ಸಾಯುವುದಿಲ್ಲ. ಸೈನಿಕ ವೃತ್ತಿಗಿಂತ ರಸ್ತೆ ಅಪಘಾತದಲ್ಲಿ ಸಾಯುವವರ ಸಂಖ್ಯೆ ಹೆಚ್ಚಳವಾಗಿದೆ. ಒಂದು ವರ್ಷಕ್ಕೆ ಸುಮಾರು 1.60 ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. ಆದ್ದರಿಂದ ಸಾವು ತಪ್ಪದು, ಸೈನಿಕರಾಗಿ ಸೇವೆ ಸಲ್ಲಿಸಲಿ ಎಂದು ಸಲಹೆ ನೀಡಿದರು.

ಕ್ಷತ್ರಿಯ ಮರಾಠ ಪರಿಷತ್ ರಾಜ್ಯಾಧ್ಯಕ್ಷ ಎಸ್.ಸುರೇಶ್‌ರಾವ್ ಸಾಠೆ, ಪ್ರಧಾನ ಕಾರ್ಯದರ್ಶಿ ಟಿ.ಆರ್.ಸುನೀತ್ ಚವ್ಹಾಣ್, ಖಜಾಂಚಿ ಟಿ.ಆರ್.ವೆಂಟಕರಾವ್ ಚವ್ಹಾಣ್, ಉದ್ಯಮಿ ಡಾ.ಕೆ.ಎಸ್.ಶಂಕರ್ ಜಾದವ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಎನ್.ಶಿವರಾವ್ ವೀರಜ್‌ಕರ್, ಉಪಾಧ್ಯಕ್ಷ ಕೆ.ಭಕ್ತವತ್ಸಲ ಜವಳೇಕರ್, ಮಾಜಿ ಶಾಸಕ ಇ.ಮಾರುತಿರಾವ್ ಪವಾರ್, ಉಪ ಸಮಾದೇಷ್ಠ ಎಸ್.ಆರ್.ಗಾಯಕ್ವಾಡ್, ಪರಿಷತ್ ಜಿಲ್ಲಾಧ್ಯಕ್ಷ ಎಚ್.ಸುರೇಶ್‌ರಾವ್, ಕಾರ್ಯದರ್ಶಿ ಅಂಜಾಜಿರಾವ್ ಬಾಂಗೆ, ಖಜಾಂಚಿ ಎಸ್.ರಾಜೇಶ್ ಇತರರಿದ್ದರು. ಲೇಖಕಿ ಹಾರಿಕ ಮಂಜುನಾಥ್ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆ ಬಗ್ಗೆ ಉಪನ್ಯಾಸ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅಮೇಜಿಂಗ್ ನೃತ್ಯ ಶಾಲೆ ಕಲಾವಿದರು ನೃತ್ಯ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net