

ಹುಬ್ಬಳ್ಳಿ: ಸ್ವರಾಜ್ ಸ್ಥಾಪನೆಯ ಸಂಕಲ್ಪದೊಂದಿಗೆ ಕ್ರಾಂತಿ ಆರಂಭಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಮರಾಠ ಸಮಾಜಕ್ಕೆ ಸೀಮಿತರಾಗದೇ ದೇಶದಲ್ಲಿ ಹಿಂದು, ಮುಸ್ಲಿಂ ಸೇರಿ ಎಲ್ಲ ಸಮುದಾಯದವರನ್ನು ಒಳಗೊಂಡು ಆಡಳಿತ ನಡೆಸಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಇಲ್ಲಿಯ ಮ್ಯಾದಾರ ಓಣಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶಿವಾಜಿ ಮೂರ್ತಿಗೆ ಪುಷ್ಪಾರ್ಚಣೆ ಮಾಡಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರ ಆದರ್ಶ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಮರಾಠ ಸಮಾಜದ ಯುವಕರು ವಿದ್ಯಾವಂಥರಾಗಬೇಕು. ಕೌಶಲ ಬೆಳೆಸಿಕೊಳ್ಳಬೇಕು. ಲಾಡ್ ಫೌಂಡೇಷನ್ ವತಿಯಿಂದ ಅರ್ಹರಿಗೆ ನೆರವು ನೀಡಲಾಗುವುದು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಕಾಂಗ್ರೆಸ್ ಮುಖಂಡರಾದ ಅನಿಲ ಪಾಟೀಲ, ಅಲ್ತಾಫ ಹಳ್ಳೂರ, ಮಯೂರ ಮೋರೆ, ವಿನಯ ಸಾವಂತ, ಕೃಷ್ಣ ಗಂಡಗಾಳೇಕರ, ಸುಭಾಸಸಿಂಗ್ ಜಮಾದಾರ, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ವಿವಿಧೆಡೆ ಆಚರಣೆ:
ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತಿ ಕಾರ್ಯಕ್ರಮವನ್ನು ನಗರದಲ್ಲಿ ಸಂಭ್ರಮ, ಸಡಗರದೊಂದಿಗೆ ಬುಧವಾರ ಆಚರಿಸಲಾಯಿತು. ತಾಲೂಕು ಆಡಳಿತ, ವಿವಿಧ ಸಂ& ಸಂಸ್ಥೆಗಳ ಸಹಯೋಗದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾಧಕರನ್ನು ಸನ್ಮಾನಿಸಲಾಯಿತು.
ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಕಲಗೌಡ ಪಾಟೀಲ, ಪೋಷಕರು ಮಕ್ಕಳಿಗೆ ಶಿವಾಜಿ ಮಹಾರಾಜರಂತಹ ಮಹನೀಯರ ಇತಿಹಾಸವನ್ನು ತಿಳಿಸಬೇಕು. ಅವರ ತತ್ವ ಮತ್ತು ಆದರ್ಶಗಳನ್ನು ಪಾಲಿಸಬೇಕು. ನಮ್ಮ ಸಂಸತಿ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಛತ್ರಪತಿ ಶಿವಾಜಿ ಮಹಾರಾಜರ ವೇಷಭೂಷಣ ತೊಟ್ಟ ವಿದ್ಯಾಥಿರ್ಗಳು ಸಂಭ್ರಮಿಸಿದರು. ತುಕಾರಾಮ, ಮಾಜಿ ಸೈನಿಕ ಶಿವಾಜಿ ಗಾಂವಕರ ಅವರನ್ನು ಸನ್ಮಾನಿಸಲಾಯಿತು.
ಗುರುನಾಥ ಉಳ್ಳಿಕಾಶಿ, ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಮುಖಂಡರಾದ ಸುನೀಲ ಧಳವಿ, ನಾರಾಯಣ ವೈದ್ಯ, ವಿದ್ಯಾಬಾಯಿ ಪವರ, ಚಂದ್ರಶೇಖರ, ಅಧಿಕಾರಿಗಳು, ವಿದ್ಯಾಥಿರ್ಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ವಾಯವ್ಯ ಸಾರಿಗೆ ಸಂಸ್ಥೆ:
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ. ನಾಯಕ್ ಮಾತನಾಡಿ, ಹಿಂದೂ ಸ್ವರಾಜ್ಯ ಕಟ್ಟಬೇಕೆನ್ನುವ ಕನಸು ಕಂಡಿದ್ದ ಹಾಗೂ ಮಹಾ ಸ್ವಾಭಿಮಾನಿ ಛತ್ರಪತಿ ಶಿವಾಜಿಯು ಭಾರತೀಯರಲ್ಲಿ ದೇಶಭಕ್ತಿ ಹುಟ್ಟಿಸಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲೂ ಸನ್ನದ್ಧರಾಗಿದ್ದರು. ಶಿವಾಜಿಯು ಹಿಂದೂ ರಾಷ್ಟ್ರದ ಪ್ರತಿಕವಾಗಿದ್ದರು ಎಂದರು.
ಕೇಂದ್ರ ಕಚೇರಿ ಇಲಾಖಾ ಮುಖ್ಯಸ್ಥ ಪ್ರಸನ್ನಕುಮಾರ ಬಾಳಾನಾಯಕ್, ಜಗದಂಬಾ ಕೋಪರ್ಡೆ, ಅಧಿಕಾರಿಗಳಾದ ಎಂ.ಬಿ. ಕಪಲಿ, ದಯಾನಂದ ಪಾಟೀಲ, ಇತರ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು. ವಿರೂಪಾಕ್ಷ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.