ಮಂಗಳೂರಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ : ಶಾಸಕ ವೇದವ್ಯಾಸ ಕಾಮತ್ ಭರವಸೆ

yyyyyyyyyyyyyyy
Published on


ಮಂಗಳೂರು : ಹಿಂದೂ ಸಾಮ್ರಾಜ್ಯ ಕಟ್ಟಿದ ಶಿವಾಜಿ ಮಹಾರಾಜರ ಸಾಧನೆ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಲಿದೆ. ಶಿವಾಜಿ ಮಹಾರಾಜರ ಹೋರಾಟ, ತ್ಯಾಗ, ಆದರ್ಶ ಇಂದಿಗೂ ನಮ್ಮನ್ನು ಪ್ರೇರೇಪಿಸುವ ದಾರಿದೀಪವಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು ನಗರದಲ್ಲಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ದ.ಕ.ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ 398 ನೇ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಮೇಯರ್ ಮನೋಜ್ ಕುಮಾರ್ ಮಾತನಾಡಿ ಶಿವಾಜಿ ಮಹಾರಾಜರ ನೆನಪಿಗಾಗಿ ಪ್ರತಿಮೆ ಅಥವಾ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡುವ ಕಾರ್ಯ ನಗರ ಪಾಲಿಕೆ ವತಿಯಿಂದ ಆಗಲಿದೆ ಎಂದರು.
ಶಿವಾಜಿ ಜಯಂತಿಯ ಸಂದೇಶ ನೀಡಿದ ಪತ್ರಕರ್ತ ಲಕ್ಷ್ಮೀ ಮಚ್ಚಿನ ಮಾತನಾಡಿ ಶಿವಾಜಿಯವರು ತನ್ನ ಧರ್ಮವನ್ನು ಪ್ರೀತಿಸಿ ಇತರ ಧರ್ಮವನ್ನು ಕೂಡ ಗೌರವಿಸಿದರು. ಅವರು ಬಲಿಷ್ಠ ನಾಯಕತ್ವದ ಸೇವಾ ಭಾವನೆಯ ಸಂಕೇತವಾಗಿದ್ದಾರೆ. ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಶಿವಾಜಿಯವರ ನೆನಪಿನಲ್ಲಿ ಮತ್ತಷ್ಟು ಕಾರ್ಯಗಳು ಆಗಬೇಕು ಎಂದರು.
ನಾಟಕಕಾರ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ದ.ಕ. ಜಿಲ್ಲಾಧ್ಯಕ್ಷ ಸುರೇಶ್ ರಾವ್, ಗಿರೀಶ್ ರಾವ್ ಬೋಂಸ್ಲೆ, ಸವಿತಾ ನಾಗೇಶ್ ಪಾಟೀಲ್, ಭಾಗ್ಯಲಕ್ಷ್ಮಿ ಸುಧಾಕರ್ ಸಿಂಧ್ಯಾ, ನಿಖಿಲ್ ಜಾದವ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ವಾರುಣಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net