

ಚಿಕ್ಕರಾಜು ಬರಗೇನಹಳ್ಳಿ ದಾಬಸ್‌ಪೇಟೆ
ಸೋಂಪುರ ಹೋಬಳಿಯ ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಶಿವಗಂಗೆಯಲ್ಲಿ ಈ ಬಾರಿಯ ದನಗಳ ಜಾತ್ರೆ ಸೊಬಗು ಕಳೆದುಕೊಂಡಿದೆ.
ಪ್ರತಿವರ್ಷ ಮಕರ ಸಂಕ್ರಾಂತಿ ಪ್ರಯುಕ್ತ ಜ.15ರಂದು ನಡೆಯುವ ಶ್ರೀ ಗಿರಿಜಾಕಲ್ಯಾಣ ಮಹೋತ್ಸವದ ಅಂಗವಾಗಿ ದನಗಳ ಜಾತ್ರೆಯೂ ನಡೆಯುವುದು ವಾಡಿಕೆ. ಅಂತೆಯೇ ಈ ಬಾರಿ ದನಗಳ ಜಾತ್ರೆ ಶುರುವಾಗಿದ್ದು, 50ರಿಂದ 60 ಜತೆ ದನಗಳು ಮಾತ್ರ ಸೇರಿರುವುದು ನಿರಾಸೆ ಮೂಡಿಸಿದೆ. ಅಂತೆಯೇ, ಸೇರಿರುವ ದನಗಳನ್ನು ಕೊಳ್ಳಲು ಆಸಕ್ತಿ ಕಡಿಮೆ ಇರುವುದುರಿಂದ ದನಗಳ ಜಾತ್ರೆ ಕಳೆಗುಂದಿದಂತಾಗಿದೆ.
ಹಿಂದೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ನಾಗಮಂಗಲ, ಪಾಂಡವಪುರ, ತುಮಕೂರು, ಮಂಡ್ಯ ಹಾಗೂ ತೆಲಂಗಾಣದಿಂದಲೂ ಎತ್ತುಗಳು, ದನಗಳು ಬರುತ್ತಿದ್ದವು. ಆದರೆ ಕಾಲ ಬದಲಾದಂತೆ ನಾಟಿ ದನಗಳ ಸಂಖ್ಯೆಯೂ ಕಡಿಮೆಯಾಗಿದೆ.
ಕೈಗಾರಿಕೆಗಳ ಪ್ರಭಾವ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳು ಹೆಚ್ಚಿದ್ದು, ಬೇಸಾಯದ ಭೂಮಿ ಈಗ ವಾಣಿಜ್ಯ ಭೂಮಿಯಾಗಿದೆ. ಇದರಿಂದ ರೈತರು ಬೇಸಾಯದಿಂದ ವಿಮುಖರಾಗಿದ್ದಾರೆ. ಬೆರಳೆಣಿಕೆಯಷ್ಟು ರೈತರು ಕೃಷಿ ಕೈಗೊಂಡರೂ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಇದರಿಂದ ಬಹುತೇಕರು ಕೃಷಿ ಕಾರ್ಯ ತ್ಯಜಿಸಿರುವ ಜತೆಗೆ ದನಗಳ ಸಾಕಣೆಯನ್ನು ಕೈಬಿಟ್ಟಿದ್ದಾರೆ. ಇದರಿಂದ ದನಗಳ ಜಾತ್ರೆ ಸೊಗಡನ್ನು ಕಳೆದುಕೊಂಡು ಕೇವಲ ನಾಮಕೇವಾಸ್ತೆ ಆಗಿದೆ.
ಯಂತ್ರಗಳ ಅವಲಂಬನೆ ರೈತರು ಅಂದು ಎಕರೆಗಟ್ಟಲೆ ಜಮೀನು ಹೊಂದಿದ್ದು, ಮನೆ ಮಂದಿಯೆಲ್ಲ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಈಗ ಕೈಗಾರಿಕೆಗಳು ಹೆಚ್ಚಾದಂತೆ ಅಳಿದುಳಿದ ಭೂಮಿಯಲ್ಲಿ ಕೃಷಿ ಕೈಗೊಂಡರೂ ಟ್ರ್ಯಾಕ್ಟರ್, ಪವರ್ ಟಿಲ್ಲರ್‌ಗಳಂತಹ ಯಂತ್ರಗಳ ಅವಲಂಬನೆ ಹೆಚ್ಚಾಗಿದೆ. ಈಗ ಎತ್ತುಗಳನ್ನು ಸಾಕುವುದು ಪ್ರತಿಷ್ಠೆಯಾಗಿದೆ.