

ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ
ನೆಲಮಂಗಲ ತಾಲೂಕು ಸೋಂಪುರ ಹೋಬಳಿ ಚಳಿಗಾಲದಲ್ಲಿ ಚಾರಣಿಗರಿಗೆ ಹಾಟ್ ೆವರೇಟ್ ಎನಿಸುತ್ತದೆ. ಇಡೀ ಹೋಬಳಿ ಸಾಲು ಸಾಲು ಬೆಟ್ಟಗಳಿಂದ ಆವೃತವಾಗಿರುವುದರಿಂದ ಚಳಿಗಾಲದ ಮುಂಜಾನೆಯ ಮಂಜು ಚಾರಣಿಗರನ್ನು ಆಕರ್ಷಿಸುತ್ತಿದೆ. ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ ದಟ್ಟಹಿಮದ ಸೆರಗಿನಲ್ಲಿ ಅವಿತಂತೆ ಭಾಸವಾಗುತ್ತದೆ.
ಡಿಸೆಂಬರ್ ಅಂತ್ಯದಿಂದ ಆರಂಭವಾಗುವ ಬೆಟ್ಟದ ಸಾಲಿನಲ್ಲಿ ಕಾಣಸಿಗುವ ಮುಂಜಾನೆಯ ಮಂಜಿನ ರಮಣೀಯ ದೃಶ್ಯ ಸವಿಯಲು ಬೆಂಗಳೂರು ಸೇರಿ ನೆರೆ ಜಿಲ್ಲೆಗಳಿಂದ ನೂರಾರು ಪ್ರವಾಸಿಗರು ದಾಂಗುಡಿ ಇಡುತ್ತಾರೆ. ಈ ಬಾರಿಯೂ ಬೆಟ್ಟದ ತಪ್ಪಲ್ಲಿನಲ್ಲಿ ನೂರಾರು ಪ್ರವಾಸಿಗರು ಬೀಡು ಬಿಟ್ಟು ಪ್ರಕೃತಿ ಸೌಂದರ್ಯ ಸವಿಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಹಲವು ಚಾರಣ ಪ್ರಿಯರು ಹಿಮದ ರಾಶಿಯಲ್ಲಿ ಬಿಸಿಯುಸಿರು ಬಿಡುತ್ತ ಟ್ರೆಕ್ಕಿಂಗ್ ಮಾಡಲು ಮುಗಿಬೀಳುತ್ತಿದ್ದಾರೆ.
ಸಾಲು ಸಾಲು ಬೆಟ್ಟ: ಶಿವಗಂಗೆಯ ಶಿವಗಂಗೆ ಬೆಟ್ಟ, ಕೆಂಗಲ್ ಬೆಟ್ಟ, ಸಿದ್ದರ ಬೆಟ್ಟ, ಆಲದಹಳ್ಳಿ ಬೆಟ್ಟ, ಹೆಗ್ಗುಂದಬೆಟ್ಟ, ಎಲೆಕ್ಯಾತನಹಳ್ಳಿ ಬೆಟ್ಟ, ನಿಜಗಲ್‌ಬೆಟ್ಟ, ದೇವರಹೋಸಹಳ್ಳಿ ಬೆಟ್ಟ ಹಾಗು ರಾಮದೇವರ ಬೆಟ್ಟಗಳು ಪ್ರವಾಸಿಗರ ನೆಚ್ಚಿನ ತಾಣಗಳಾಗಿದ್ದು ಚಳಿಗಾಲದ ಮಂಜಿನ ಖುಷಿ ಅನುಭವಿಸಲು ಹಾತೊರೆಯುತ್ತಿರುವ ದೃಶ್ಯ ಕಂಡುಬರುತ್ತಿದೆ.
ರಸ್ತೆ ಕಾಣದಷ್ಟು ದಟ್ಟ ಹಿಮ: ಬೆಟ್ಟದ ಸಾಲುಗಳನ್ನು ಸವರಿಕೊಂಡು ಸಾಗುವ ರಸ್ತೆಗಳಲ್ಲಿ ದಟ್ಟ ಹಿಮ ಆವರಿಸಿಕೊಂಡು ದಾರಿ ಯಾವುದು ಎಂಬುದೇ ಗೋಚರವಾಗುವುದಿಲ್ಲ. ವಾಹನಗಳಲ್ಲಿ ಬರುವ ಚಾರಣಿಗರು, ಪ್ರವಾಸಿಗರು ವಾಹನಗಳ ದೀಪ ಬೆಳಗಿಸಿಕೊಂಡು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಇದರಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತಗಳಿಗೆ ಆಹ್ವಾನ ನೀಡಿದಂತಾಗುತ್ತದೆ.
ಪ್ರವಾಸಿಗರಿಗೆ ಮುದ ನೀಡುವ ದೃಶ್ಯ; ಚಾರಣಕ್ಕಾಗಿ ಬೆಟ್ಟಗಳತ್ತ ಧಾವಿಸುವ ಪ್ರವಾಸಿಗರಿಗೆ ದಾರಿಯುದ್ದಕ್ಕೂ ಸ್ಥಳೀಯ ರೈತರು ಮುಂಜಾನೆಯ ಕಾಯಕ ಆರಂಭಿಸುವ ದೃಶ್ಯಗಳು ಗಮನ ಸೆಳೆಯುತ್ತವೆ. ಹೊಲಗದ್ದೆಗಳ ಕಡೆ ಹೊರಡುವ ರೈತರು, ದನಕರುಗಳ ನಡಿಗೆ, ಬೀದಿ ಬದಿ ಗೂಡಂಗಡಿ ಬಳಿ ಕಾಫಿ-ಟೀ ಹೀರುತ್ತಾ ಕೂರುವ ಜನ, ರಸ್ತೆ ಬದಿ ಬಿದ್ದ ಕಸಕಡ್ಡಿಗಳನ್ನು ಗುಡ್ಡೆ ಮಾಡಿ ಬೆಂಕಿ ಕಾಯಿಸಿಕೊಳ್ಳುವ ಮಂದಿ ಪ್ರವಾಸಿಗರ ಪ್ರವಾಸಕ್ಕೆ ಒಂದಷ್ಟು ಮುದ ನೀಡುತ್ತವೆ. ಮಳೆಗಾಲ ಹಾಗೂ ಬೇಸಿಗೆ ಕಾಲದ ಮಧ್ಯಭಾಗದಲ್ಲಿ ಕಂಡುಬರುವ ವಿಶೇಷ ಹವಾಮಾನದಿಂದ ಸಹಜವಾಗಿ ಸೃಷ್ಟಿಯಾಗುವ ದಟ್ಟ ಮಂಜು, ಇಬ್ಬನಿಗಳ ಚಾದರ ಪ್ರವಾಸಿಗರನ್ನು ಮಾಯಾಲೋಕಕ್ಕೆ ಕರೆದೊಯ್ಯುವಂತೆ ಭಾಸವಾಗುತ್ತದೆ.
ಬಿಸಿ ಪಾನೀಯಕ್ಕೆ ಬೇಡಿಕೆ: ಬೆಟ್ಟಗಳ ಸಾಲಿಗೆ ಅಂಟಿಕೊಂಡಂತೆ ಸಾಲು ಸಾಲು ಪೆಟ್ಟಿಅಂಗಡಿಗಳಲ್ಲಿ ಬಿಸಿ ಪಾನೀಯಗಳಿಗೆ ಹೆಚ್ಚು ಬೇಡಿಕೆ ಕುದುರುತ್ತದೆ. ಇತ್ತ ಸಾಗುವ ಪ್ರತಿ ಪ್ರವಾಸಿಗರು ಪಾನೀಯ ಸವಿಯದೆ ಮುಂದೆ ತೆರಳುವುದೇ ಇಲ್ಲ ಎನ್ನುವಷ್ಟು ಜನದಟ್ಟಣೆ ಕಂಡುಬರುತ್ತದೆ. ಡಿಸೆಂಬರ್ ಹಾಗೂ ಜನವರಿ ಮಧ್ಯಭಾಗದಲ್ಲಿ ಬೆಟ್ಟದ ತಪ್ಪಲಿನಲ್ಲಿನ ಗೂಡಂಗಡಿಗಳಲ್ಲಿ ಕಾಫಿ-ಟೀ ವ್ಯಾಪಾರಿಗಳು ಒಂದಷ್ಟು ಲಾಭ ಕಾಣಲು ಸಾಧ್ಯವಾಗುತ್ತದೆ.