

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತೀ ವರ್ಷದಂತೆ ಈ ಬಾರಿಯೂ ಚಾರಣಿಗರ ಸ್ವರ್ಗ ಎನಿಸುವ ಶಿವಗಂಗೆ ಬೆಟ್ಟದಲ್ಲಿ ಹಿಮದ ರಾಶಿ ಹಾಸುಹೊದ್ದು ಮಲಗಿದ್ದು ಪ್ರಕೃತಿಯ ರಮಣೀಯ ಸೊಬಗನ್ನು ಕಣ್ತುಂಬಿಕೊಳ್ಳಲು ನೂರಾರು ಜನರ ಮುತ್ತಿಗೆ ಹಾಕುತ್ತಿದ್ದಾರೆ. ಮಂಜಿನಲಿ ಮರೆಯಾಗಿ ಕುಳಿತಿರುವಂತೆ ಭಾಸವಾಗುವ ದಕ್ಷಿಣ ಕಾಶಿಯ ಸುತ್ತ ಪ್ರವಾಸಿಗರ ದಂಡು ಪ್ರದಕ್ಷಣೆ ಹಾಕುತ್ತಿದೆ.
ನೆಲಮಂಗಲ ತಾಲೂಕು ಸೋಂಪುರ ಹೋಬಳಿ ಸಾಲು ಸಾಲು ಬೆಟ್ಟಗಳಿಂದ ಆವೃತ್ತವಾಗಿರುವುದರಿಂದ ಚಳಿಗಾಲದ ಮುಂಜಾನೆಯ ಮಂಜು ಚಾರಣಿಗರನ್ನು ಆಕರ್ಷಿಸುತ್ತಿದೆ. ಶಿವಗಂಗೆ ಬೆಟ್ಟ ದಟ್ಟಹಿಮದ ಸೆರಗಿನಲ್ಲಿ ಅವಿತು ಕಣ್ಣಾಮುಚ್ಚಾಲೆ ಆಡುತ್ತಿರುವಂತೆ ಭಾಸವಾಗುತ್ತಿದೆ. ರಸ್ತೆ ಯಾವುದು ಎಂಬುದನ್ನೂ ಗುರುತಿಸಲೂ ಸಾಧ್ಯವಾಗದಂತೆ ದಟ್ಟಮಂಜು ಆವರಿಸಿದ್ದು ಪ್ರವಾಸಿಗರಿಗೆ ಭೂಮಿಯ ಸ್ವರ್ಗ ಸೃಷ್ಟಿಸಿದೆ.
ಡಿಸೆಂಬರ್ ಅಂತ್ಯದಿಂದ ಆರಂಭವಾಗುವ ಬೆಟ್ಟದ ಸಾಲಿನಲ್ಲಿ ಕಾಣಸಿಗುವ ಮುಂಜಾನೆಯ ಮಂಜಿನ ರಮಣೀಯ ದೃಶ್ಯ ಸವಿಯಲು ಬೆಂಗಳೂರು ಸೇರಿ ನೆರೆ ಜಿಲ್ಲೆಗಳಿಂದ ನೂರಾರು ಪ್ರವಾಸಿಗರು ದಾಂಗುಡಿ ಇಡುತ್ತಾರೆ. ಈ ಬಾರಿಯೂ ಬೆಟ್ಟದ ತಪ್ಪಲ್ಲಿನಲ್ಲಿ ನೂರಾರು ಪ್ರವಾಸಿಗರು ಬೀಡು ಬಿಟ್ಟು ಪ್ರಕೃತಿ ಸೌಂದರ್ಯ ಸವಿಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಹಲವು ಚಾರಣ ಪ್ರಿಯರು ಹಿಮದ ರಾಶಿಯಲ್ಲಿ ಬಿಸಿಯುಸಿರು ಬಿಡುತ್ತಾ ಟ್ರೆಕ್ಕಿಂಗ್ ಆನಂದ ಅನುಭವಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.
ಸಾಲು ಸಾಲು ಬೆಟ್ಟ: ಶಿವಗಂಗೆಯ ಶಿವಗಂಗೆ ಬೆಟ್ಟ, ಕೆಂಗಲ್ ಬೆಟ್ಟ, ಸಿದ್ದರ ಬೆಟ್ಟ, ಆಲದಹಳ್ಳಿ ಬೆಟ್ಟ, ಹೆಗ್ಗುಂದಬೆಟ್ಟ, ಎಲೆಕ್ಯಾತನಹಳ್ಳಿ ಬೆಟ್ಟ, ನಿಜಗಲ್‌ಬೆಟ್ಟ, ದೇವರಹೋಸಹಳ್ಳಿ ಬೆಟ್ಟ ಹಾಗು ರಾಮದೇವರ ಬೆಟ್ಟಗಳು ಪ್ರವಾಸಿಗರ ನೆಚ್ಚಿನ ತಾಣಗಳಾಗಿದ್ದು ಚಳಿಗಾಲದಲ್ಲಿ ಇಲ್ಲಿನ ವ್ಯಾಪ್ತಿಯ ಹಿಮಮಯವಾಗಿರುತ್ತದೆ. ಹಿಮಾಲಯದಂತೆ ಕಾಣುವ ಬೆಟ್ಟದ ಸಾಲುಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಪ್ರವಾಸಿಗರಿಗೆ ಮುದ ನೀಡುವ ದೃಶ್ಯಗಳು; ಚಾರಣಕ್ಕಾಗಿ ಬೆಟ್ಟಗಳತ್ತ ದಾವಿಸುವ ಪ್ರವಾಸಿಗರಿಗೆ ದಾರಿಯುದ್ದಕ್ಕೂ ಸ್ಥಳೀಯ ರೈತರು ಮುಂಜಾನೆಯ ಕಾಯಕ ಆರಂಭಿಸುವ ದೃಶ್ಯಗಳು ಗಮನ ಸೆಳೆಯುತ್ತವೆ. ಹೊಲಗದ್ದೆಗಳ ಕಡೆ ಹೊರಡುವ ರೈತರು, ಬೀದಿ ಬದಿಯಲ್ಲಿನ ಸಣ್ಣ ಹೋಟೆಲ್‌ಗಳಲ್ಲಿ ಮೈನಡಗುವ ಚಳಿಯಲ್ಲಿ ಕಾಫಿ-ಟೀ ಹೀರುತ್ತಾ ಕೂರುವ ಜನ, ರಸ್ತೆ ಬದಿ ಬೆಂಕಿ ಕಾಯಿಸಿಕೊಳ್ಳುವ ಮಂದಿ ಮತ್ತಿತರ ವಿಶೇಷ ದೃಶ್ಯಗಳು ಗಮನ ಸೆಳೆಯುತ್ತವೆ.
ಚಿರತೆಗಳ ಆತಂಕ: ಪ್ರತಿ ವರ್ಷ ಇದೇ ವೇಳೆ ಸಾವಿರಾರು ಚಾರಣಿಗರು, ಪ್ರವಾಸಿಗರು ಇತ್ತ ಕಡೆ ಲಗ್ಗೆ ಹಾಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಚಿರತೆಗಳ ಹಾವಳಿ ಕಾರಣ ಜನ ಮುಂಜಾನೆ ವೇಳೆ ಇತ್ತ ಕಡೆ ಬರಲು ಹಿಂದೇಟು ಹಾಕುತ್ತಿದ್ದಾರೆ, ಅರಣ್ಯ ಇಲಾಖೆಯೂ ಸಾಕಷ್ಟು ಜಾಗೃತಿ ಮೂಡಿಸುತ್ತಿರುವುದರಿಂದ ಜನರು ಮೀನಮೇಷ ಏಣಿಸುತ್ತಿದ್ದು ಪ್ರಕೃತಿ ಸೌಂದರ್ಯ ಸವಿಯಲು ಚಿರತೆ ಭೀತಿ ಅಡ್ಡಗಾಲು ಹಾಕಿದೆ ಎಂಬ ಮಾತು ಕೇಳಿಬರುತ್ತಿದೆ.