

ಗುಳೇದಗುಡ್ಡ: ಬೆನಕನಾಳರವರು ತಮ್ಮ 76ರ ವಿಶ್ರಾಂತ ಬದುಕಿನಲ್ಲಿಯೂ ನಾಟಕ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡು ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ ಎಂದು ರಂಗಕರ್ಮಿ ಡಾ. ವಿಶ್ವನಾಥ ವಂಶಾಕೃತಮಠ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಾವಿಕಟ್ಟಿ ನಾಟ್ಯ ಸಂಘ ಹಾಗೂ ಓದುಮನೆ ಗುಳೇದಗುಡ್ಡ ಸಹಯೋಗದಲ್ಲಿ ನಡೆದ ಡಾ. ವಿ.ಎ. ಬೆನಕನಾಳ ವಿರಚಿತ ಶಂಕರ ನಾಮಾಂಕಿತ ಶಿವದಾಸಿಮಯ್ಯ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿ ಡಾ. ವಿ.ಎ. ಬೆನಕನಾರು ಶಂಕರ ನಾಮಾಂಕಿತ ಶಿವದಾಸಿಮಯ್ಯ ಎಂಬ ನಾಟಕವನ್ನು ರಚಿಸುವುದರ ಮೂಲಕ ಶಿವಶರಣರ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾರ್ಯ ಮಾಡಿದ್ದಾರೆ. ಸುಮಾರು 1200 ವರ್ಷಗಳಿಂದಲೂ ಎಲೆಮರೆಯ ಕಾಯಿಯಂತೆಯೇ ಇರುವ ಶಿವದಾಸಿಮಯ್ಯನವರ ಚರಿತ್ರೆಯನ್ನು ಸಂಶೋಧಿಸಿ, ಐತಿಹ್ಯಗಳನ್ನು ದಾಖಲಿಸಿ ಬರೆದು, ಅದನ್ನು ನಾಟಕದ ಮೂಲಕ ಕಟ್ಟಿಕೊಟ್ಟಿರುವುದು ರಂಗಭೂಮಿಗೆ, ಶರಣರ ಚರಿತ್ರೆಗೆ ನೀಡಿರುವ ದೊಡ್ಡ ಕೊಡುಗೆಯಾಗಿದೆ ಎಂದರು.
ಎಸ್.ಆರ್. ಮನಹಳ್ಳಿ ಮಾತನಾಡಿ, ಅಲಕ್ಷಿತ ಶಿವಶರಣರ ಬದುಕು ಹಾಗೂ ವಚನ ಸಾಹಿತ್ಯ ಇಂದಿಗೂ ಮರೆಯಲ್ಲೇ ಉಳಿದಿದೆ. ಬೆನಕನಾಳ ಅವರು ಶಿವದಾಸಿಮಯ್ಯನವರ ಬದುಕನ್ನು ನಾಟಕದ ಮೂಲಕ ಕಟ್ಟಿಕೊಟ್ಟಿರುವುದು ಶ್ಲಾಘನೀಯ. ಇದೇ ರೀತಿ ಅಲಕ್ಷಿತವಾಗಿರುವ ಶರಣ ಚರಿತ್ರೆ, ವಚನಗಳು ಬೆಳಕಿಗೆ ಬರಬೇಕು ಎಂದರು.
ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಹಿತಿ ಡಾ. ಬೆನಕನಾಳ ಅವರು ಶಿವದಾಸಿಮಯ್ಯ ನಾಟಕ ರಚಿಸಿ ನಿರ್ದೇಶಿಸುತ್ತಿರುವುದು ಅವರ ಚಿರಂತನ ಕ್ರಿಯಾಶೀಲತೆಗೆ ಸಾಕ್ಷಿ. ಬಾವಿಕಟ್ಟಿ ನಾಟ್ಯ ಸಂಘವು ಈ ನಾಟಕವನ್ನು ಪ್ರದರ್ಶಿಸಿ ಹೊಸ ಪರಂಪರೆಗೆ ನಾಂದಿ ಹಾಡಿದೆ ಎಂದರು.
ಶಿವಸಿಂಪಿ ಸಮಾಜದ ಅಧ್ಯಕ್ಷ ಎಸ್.ಆರ್. ಬರಹಾಣಪೂರ ಡಾ. ವಿ.ಎ. ಬೆನಕನಾಳರವರಿಗೆ ಪುಸ್ತಕ ಪ್ರಕಟಣೆಗಾಗಿ 5000 ರೂ. ಗಳ ಕಾಣಿಕೆ ನೀಡಿ ಸನ್ಮಾನಿಸಿದರು. ಭಾವಿಕಟ್ಟಿ ನಾಟ್ಯ ಸಂಘ ಅಧ್ಯಕ್ಷ ಚಂದ್ರಕಾಂತ ಶೇಖಾ ಅವರನ್ನು ಸನ್ಮಾನಿಸಲಾಯಿತು.
ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಡಾ. ವಿ.ಎ. ಬೆನಕನಾಳ, ಪ್ರೊ. ಬಸವರಾಜ ತೇಲಸಂಗ, ಗುರೂಜಿ ಬಸವರಾಜ ಹಡಗಲಿ, ಮಹಾದೇವ ಜಗತಾಪ, ರಂಗಸಮಾಜದ ಸದಸ್ಯರಾದ ಮಹಾಂತೇಶ ಗಜೇಂದ್ರಗಡ, ಪ್ರೊ. ಚಂದ್ರಶೇಖರ ಹೆಗಡೆ, ಅಭಿನೇತ್ರಿ ಉಮಾರಾಣಿ, ಮಲ್ಲಿಕಾರ್ಜುನ ರಾಜನಾಳ, ಶಿವಶಂಕ್ರಪ್ಪ ಸಾರಂಗಿ, ಶಿವಪ್ಪ ಕಲಬುರ್ಗಿ, ಶೇಖರಪ್ಪ ಹೊಸಮನಿ, ಸಿದ್ದಣ್ಣ ಪರಗಿ, ಬಸವರಾಜ ಕಾಳಿ, ಪ್ರಮೋದ ಕಲಬುರ್ಗಿ, ಜ್ಞಾನಸಿಂಧು ಕಲಾಬಳಗದ ಶಂಕರ ಮುಂದಿನಮನಿ, ಚಿದಾನಂದಸಾ ಕಾಟವಾ, ಶಂಕರ ಸಣಪಾ, ಪ್ರೊ. ಚಂದ್ರಶೇಖರ ಹೆಗಡೆ ಮತ್ತಿತರರಿದ್ದರು.