

ಹೊನ್ನಾಳಿ: ಪಾಲಕರು ಮೊದಲು ಸರ್ಕಾರಿ ಶಾಲೆ ಬಗ್ಗೆ ಇರುವ ಕೀಳರಿಮೆ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಹತ್ತೂರಿನ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸರ್ಕಾರಿ ಶಾಲೆಗಳು ಉಳಿಯುವುದೇ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಈ ಗ್ರಾಮದ ಕನ್ನಡ ಶಾಲೆ ನೂರು ವಸಂತಗಳನ್ನು ಪೂರೈಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ. ಇದಕ್ಕೆ ಗ್ರಾಮದ ಜನತೆ, ಶಿಕ್ಷಣ ಇಲಾಖೆ, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿ ಸಮೂಹಗಳ ಶ್ರಮ ಕಾರಣ ಎಂದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಹತ್ತೂರು ಮಾದೇನಹಳ್ಳಿ, ಜೀನಹಳ್ಳಿ ಸೇರಿ ಈ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯ ಕೊಟ್ಟು ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳನ್ನು ಪೋಷಿಸಿದ ಮುಖಂಡ ಜೆ. ರಾಮಪ್ಪ ಮತ್ತು ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪನವರ ಕೊಡುಗೆ ಸ್ಮರಿಸಬಹುದಾಗಿದೆ ಎಂದರು.
1994- 99ರಲ್ಲಿ ಇಡೀ ದೇಶದಲ್ಲಿಯೇ ಪಾರದರ್ಶಕವಾಗಿ, ಪ್ರತಿಭೆಯ ಆಧಾರದ ಮೇಲೆ ರಾಜ್ಯದ ಅಂದಿನ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡ ಅವರು 1.10 ಲಕ್ಷ ಶಿಕ್ಷಕರನ್ನು ನೇಮಕ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇದರ ಫಲವಾಗಿ ಇಂದು ಸರ್ಕಾರಿ ಶಾಲೆಗಳಲ್ಲಿ ಅರ್ಹ ಪ್ರತಿಭಾವಂತ ಶಿಕ್ಷಕರಿದ್ದಾರೆ ಎಂದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಶಿಕ್ಷಣ ವ್ಯವಸ್ಥೆ, ಸಂಸ್ಕೃತಿ, ಸಂಸ್ಕಾರದಿಂದ ದೇಶ ಎಲ್ಲ ಕ್ಷೇತ್ರಗಳಿಗೆ ಸ್ಪರ್ಧೆ ನೀಡುತ್ತಿದೆ ಎಂದರು.
ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ, ಬಿಇಒ ಕೆ.ಟಿ. ನಿಂಗಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್.ಪಿ. ಮಂಜುಳಾ ಇತರರು ಮಾತನಾಡಿದರು. ಕಾಂಗ್ರೆಸ್ ಮುಖಂಡ ಎಚ್.ಎ. ಉಮಾಪತಿ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಭಿನಂದನೆ ಪತ್ರ ಓದಿದರು.
ಮುಖ್ಯಶಿಕ್ಷಕ ಮೇಘರಾಜ್, ಎಸ್ಬಿಎಂಸಿ ಅಧ್ಯಕ್ಷ ಡಿ.ವಿ. ಉಮೇಶ್, ಜಿಲ್ಲಾ ಶ್ರೇಷ್ಟ ಕೃಷಿ ಪ್ರಶಸ್ತಿ ವಿಜೇತ ದೊಡ್ಡಬಸಪ್ಪ, ನೇಮಿಚಂದ್ರಪ್ಪ, ಈಶ್ವರಪ್ಪ, ಜಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರಪ್ಪ ಇತರರಿದ್ದರು.