

ಹುಬ್ಬಳ್ಳಿ: ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ನೇತೃತ್ವದಲ್ಲಿ ಜ. 16ರಿಂದ 18ರವರೆಗೆ ವಿದ್ಯಾನಗರದ ರಂಭಾಪುರಿ ಸಮುದಾಯ ಭವನದಲ್ಲಿ ಶಿವಾಚಾರ್ಯ ಸಂಸ್ಕೃತಿ ಪುನಶ್ಚೇತನ ಚಿಂತನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮದ್ವೀರಶೈವ ಸದ್ಬೋಧನ ಸಂಸ್ಥೆ ಅಧ್ಯಕ್ಷ, ಜುಕ್ತಿಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಚೀನವಾದ ವೀರಶೈವ ಪಂಚಪೀಠಗಳ ಪರಂಪರೆಯಲ್ಲಿ 10 ಸಾವಿರಕ್ಕೂ ಅಧಿಕ ಶಾಖಾ ಮಠಗಳಿವೆ. ಕಾಲ ಕಾಲಕ್ಕೆ ಮಠದ ಚುಕ್ಕಾಣಿ ಹಿಡಿಯುವವರು ಬದಲಾಗುವುದರಿಂದ ಪುನಶ್ಚೇತನ ಅವಶ್ಯವಾಗಿ ಆಗಬೇಕಿದೆ. ಸಮಾಜಕ್ಕೆ ಹೇಗೆ ಮಾರ್ಗದರ್ಶನ ಮಾಡಬೇಕು ಎಂಬುದನ್ನು ತಿಳಿಸಿಕೊಡುವುದು ಪೀಠಗಳ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಜ. 16ರಂದು ಸಂ. 6.30ಕ್ಕೆ ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. ಶಿವಾಚಾರ್ಯರ ಮೂಲಭೂತ ಕರ್ತವ್ಯಗಳು ಕುರಿತು ಶಿವಗಂಗಾ ಕ್ಷೇತ್ರದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯರು ಹಾಗೂ ವೀರಶೈವ ಧರ್ಮ ಸಂಸ್ಕೃತಿ ಸಂರಕ್ಷಣೆ ಕುರಿತು ಅಮ್ಮಿನಭಾವಿ ಪಂಚಗೃಗ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರು ಮಾತನಾಡುವರು.
ಜ. 17ರಂದು ಕೆಳದಿಯ ಡಾ. ಮಹೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದು, ಶಿವಾಚಾರ್ಯರಿಗೆ ಅಧ್ಯಯನ ಮತ್ತು ಆಚರಣೆ ಕುರಿತು ಹಲಗೂರಿನ ಶ್ರೀ ರುದ್ರಮುನಿ ಶಿವಾಚಾರ್ಯರು, ಶಿವಾಚಾರ್ಯರಿಂದ ಧರ್ಮ ಪ್ರಸಾರದ ಪ್ರಾಕಾರಗಳು ಕುರಿತು ಕುಪ್ಪೂರಿನ ಡಾ. ಯತೀಶ್ವರ ಶಿವಾಚಾರ್ಯರು ಪ್ರವಚನ ನೀಡುವರು.
ಜ. 18ರಂದು ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಪ್ರಚಲಿತ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಎಸಳೂರಿನ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ವೀರಶೈವ ಧರ್ಮಕ್ಕೆ ಶಿವಾಚಾರ್ಯರ ಕೊಡುಗೆಗಳು ಕುರಿತು ನೆಗಳೂರಿನ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರು ಮಾತನಾಡುವರು.
ನಿತ್ಯ ಬೆಳಗ್ಗೆ 10.30ಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು, ಆಗಮಿಸಿದ ಎಲ್ಲ ಪಟ್ಟಾಧ್ಯಕ್ಷರ ಜತೆ ವೀರಶೈವ ಧರ್ಮ ಪರಂಪರೆ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ರ್ಚಚಿಸುವರು. ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವೀರಶೈವ ಲಿಂಗಾಯಿತ ಬೇರೆ ಬೇರೆ ಎನ್ನುವ ವಿಘಟಿತ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ವೀರಶೈವರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ಸರ್ಕಾರವನ್ನು ಆಗ್ರಹಿಸಲು ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಶ್ರೀ ವಿಮಲರೇಣುಕ ಶಿವಾಚಾರ್ಯರು ಮಾತನಾಡಿ, ಸುಮಾರು 300 ಜನ ಶಿವಾಚಾರ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಮದ್ವೀರಶೈವ ಸದ್ಬೋಧನ ಸಂಸ್ಥೆಯ ಹುಬ್ಬಳ್ಳಿ ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಡಾ. ಸಂಗಮೇಶ ಸವದತ್ತಿಮಠ ಹಾಗೂ ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಇದ್ದರು.