

ನೆಲಮಂಗಲ: ಜಾಗತಿಕ ಶಾಂತಿ ಹಾಗೂ ಪ್ರಗತಿಗಾಗಿ ಫೆ.16ರಂದು ಶಿವಯೋಗ ಸಂಭ್ರಮ, ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವ ಶರಣರ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಸಕಲ ಸಿದ್ಧತೆ ನಡೆದಿದೆ ಎಂದು ಚಿತ್ರದುರ್ಗ ಮುರುಘಾಮಠದ ಡಾ.ಶ್ರೀ ಶಿವಮೂರ್ತಿ ಮುರುಘಾಶರಣರು ತಿಳಿಸಿದರು.
ಶುಕ್ರವಾರ ಬೆಂಗಳೂರು ಉತ್ತರ ತಾಲೂಕು ಮಾದಾವರ ಗ್ರಾಮದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಪಕ್ಕದಲ್ಲಿರುವ ನಂದಿ ಗ್ರೌಂಡ್ಸ್ನಲ್ಲಿ ಆಯೋಜಿಸಿರುವ ಸಮ್ಮೇಳನದ ಸಿದ್ಧತೆ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. 12ನೇ ಶತಮಾನದ ಬಸವ, ಶರಣ ಮಾರ್ಗದ ಅನುಸರಣೆ ಮಾಡಿ 21ನೇ ಶತಮಾನದಲ್ಲೂ ಸಮಾಜದ ಎಲ್ಲ ವರ್ಗಗಳನ್ನು ಜತೆಯಲ್ಲಿ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಅದ್ವಿತೀಯ, ಅಪ್ರತಿಮ ಹಾಗೂ ವಿರಳವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸರ್ವಜನಾಂಗದ ಮಠಾಧೀಶರು, ಸರ್ವಧರ್ಮ ಗುರುಗಳು ಪಾಲ್ಗೊಳ್ಳುತ್ತಿದ್ದು ಅನುಭವ ಮಂಟಪದ ರೀತಿಯಲ್ಲಿ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಸಮ್ಮೇಳನದಲ್ಲಿ ತಗೆದುಕೊಳ್ಳುವ ನಿರ್ಣಯಗಳಿಂದ ಇಡೀ ವಿಶ್ವಕ್ಕೆ ಒಳ್ಳೆಯ ಸಂದೇಶ ರವಾನೆಯಾಗಲಿದೆ. ಹೊರರಾಜ್ಯಗಳ ಲಕ್ಷೋಪಲಕ್ಷ ಜನರು ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಮಾಜ, ರಾಜ್ಯ, ರಾಷ್ಟ್ರದ ಜತೆಗೆ ಜಗದ ಅಭಿವೃದ್ಧಿಗೆ ಅವಶ್ಯವಿರುವ ಶಾಂತಿಯನ್ನು ಸಮಾವೇಶದಿಂದ ಕಂಡುಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಶತಮಾನದ ಅದ್ಭುತ ಸರ್ವಧರ್ಮ ಸಮ್ಮೇಳನ ರಾಜ್ಯರಾಜಧಾನಿಯಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಮಂತ್ರಿಗಳಾದ ಸದಾನಂದಗೌಡ, ಪ್ರಲ್ಹಾದ್ ಜೋಶಿ, ರವಿಶಂಕರ್ ಗುರೂಜಿ, ದಲೈಲಾಮಾ, ವಿವಿಧ ಮಠಾಧೀಶರು ಆಗಮಿಸಲಿದ್ದಾರೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಲಕ್ಷಾಂತರ ಜನರಿಗಾಗಿ 3500 ಬಸ್ಗಳ ವ್ಯವಸ್ಥೆ, ರ್ಪಾಂಗ್ ಸೌಲಭ್ಯ, ಕಾರ್ಯಕ್ರಮ ವೀಕ್ಷಿಸಲು ಅವಶ್ಯ ವಿರುವ ಆಸನಗಳ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಡೆಯುವ ಶಿವಯೋಗ ಸಂಭ್ರಮಕ್ಕೂ ಅಗತ್ಯ ವಿರುವ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ ಎಂದರು.
ಚಿತ್ರದುರ್ಗ ಮಾದಾರಚೆನ್ನಯ್ಯ ಗರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಬೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವಬಳಗದ ಅಧ್ಯಕ್ಷ ಓಂಕಾರಮೂರ್ತಿ, ರಾಷ್ಟ್ರೀಯ ಬಸವಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ.ಸುರೇಶ್, ಪದಾಧಿಕಾರಿ ರತ್ನಾಕರ್, ಬೆಂ.ನಗರ ಜಿಲ್ಲಾಪಂಚಾಯಿತಿ ಸದಸ್ಯ ಜಿ.ಮರಿಸ್ವಾಮಿ, ಮುಖಂಡರಾದ ಸೋಂಪುರ ರುದ್ರೇಶ್, ರಂಗಧಾಮಯ್ಯ, ಕೆ.ಪಿ.ಬೃಂಗೀಶ್, ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಪಿ.ಆನಂದ್ ಮತ್ತಿತರರು ಉಪಸ್ಥಿತರಿದ್ದರು.