ಶಿವಶರಣರ ತತ್ವ ಸಮಾಜಕ್ಕೆ ದಾರಿ ದೀಪ, ಶ್ರೀ ಬಸವ ಮಾಚಿದೇವ ಸ್ವಾಮೀಜಿ ಅಭಿಮತ, ಸಮುದಾಯದ ಜನಪ್ರಧಿನಿಗಳ ಆಯ್ಕೆಗೆ ಮನವಿ

01 Nela Ph 01 Udgatane
Published on

ನೆಲಮಂಗಲ: ಮಡಿವಾಳ ಮಾಚಯ್ಯ ಅವರ ತತ್ವ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಚಿತ್ರದುರ್ಗದ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ರಾಜ್ಯ ಮಡಿವಾಳ ಮಾಚಯ್ಯ ಸಂಘ, ತಾಲೂಕು ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಯ್ಯ ಜಯಂತಿಯಲ್ಲಿ ಮಾತನಾಡಿದರು.

12ನೇ ಶತಮಾನದ ಬಸವಾದಿ ಶರಣರ ಗಣದಲ್ಲಿದ್ದ ಮಾಚಿದೇವರು ಸಮುದಾಯದ ಪ್ರತಿನಿಧಿಯಾಗಿದ್ದರು. ಮಾಚಿದೇವರು ರಚಿಸಿದ್ದ 900ಕ್ಕೂ ಹೆಚ್ಚು ವಚನಗಳು ದೊರೆತಿವೆ. ಹಾಗೆಯೇ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಸಮುದಾಯದ ಜನಪ್ರತಿನಿಧಿಗಳ ಅವಶ್ಯಕತೆಯಿದೆ ಎಂಬುದನ್ನು ಮನಗಾಣಬೇಕು ಎಂದರು.

ಅತ್ಯಾಧುನಿಕ ಮಡಿಕಟ್ಟೆ ನಿರ್ಮಿಸಿಕೊಡಬೇಕು. ಸರ್ಕಾರದಿಂದ ಸಿಗುವ ಸೌಕರ್ಯ ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ತಹಸೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಡಿವಾಳ ಸಮುದಾಯದ ಮಹತ್ವದ ಪತ್ರವಹಿಸುತ್ತಿದೆ. ಮಡಿವಾಳ ಸಮುದಾಯವನ್ನು ಸಮಾಜ ಅವಲಂಬಿಸಿದೆ. ಕುಲಕಸುಬಿಗೆ ಸೀಮಿತವಾಗದೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಸ್ಥಾನ ಅಲಂಕರಿಸುವಂತೆ ಮಾಡುವ ಜವಾಬ್ದಾರಿ ಸಮುದಾಯ ಸಂಘಟನೆಗಳು ಹಾಗೂ ಮುಖಂಡರ ಮೇಲಿದೆ ಎಂದರು.

ನಿತ್ಯ ಜನಸಾಮಾನ್ಯರ ಬಟ್ಟೆ ಶುಚಿಗೊಳಿಸುವ, ಸ್ವಚ್ಛ ಸಮಾಜ ನಿರ್ಮಾಣ ಮಾಡುತ್ತಿರುವ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸರ್ಕಾರದ ಸವಲತ್ತು ನೀಡಬೇಕು ಎಂದು ಸ್ವಾಮಿಜಿ ಒತ್ತಾಯಿಸಿದರು.

ನಗರಸಭೆ ಅಥವಾ ಹೊರವಲಯದಲ್ಲಿ ಸಮುದಾಯದ ಕುಲಕಸುಬಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಡಿಕಟ್ಟೆ ನಿರ್ಮಿಸಲು ಅವಶ್ಯವಿರುವ ಜಾಗವನ್ನು ನೀಡುವಂತೆ ಸಂಘಟನೆಯ ಪದಾಧಿಕಾರಿಗಳು ತಹಸೀಲ್ದಾರ್‌ರಲ್ಲಿ ಮನವಿ ಮಾಡಿದರು.

ರಾಜ್ಯ ಮಡಿವಾಳ ಮಾಚಯ್ಯ ಸಂಘದ ನೆಲಮಂಗಲ ತಾಲೂಕು ಗೌರವಾಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷ ಹುಚ್ಚಪ್ಪ, ಕಾರ್ಯದರ್ಶಿ ಚಿಕ್ಕರಾಜು, ಖಜಾಂಚಿ ಕೃಷ್ಣಪ್ಪ, ಹೋಬಳಿ ಅಧ್ಯಕ್ಷ ಗಂಗಧಾರ್, ಕೆ.ಪ್ರಕಾಶ್, ನಿರ್ದೇಶಕರಾದ ವೆಂಕಟಪ್ಪ, ದಾಕ್ಷಾಯಿಣಿ, ಮುಖಂಡ ಪ್ರಭಾಕರ್ ಮತ್ತಿತರರು ಉಪಸ್ಥಿತರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net