ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ

10 Dwd 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಎಲ್ಲ ಧರ್ಮ, ಜಾತಿ, ಮತ- ಪಂಥಗಳ ಭೇದವಿಲ್ಲದೇ ಎಲ್ಲರೂ ಸಾಮರಸ್ಯದಿಂದ ಬಾಳಬೇಕು ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ವಿನಯ ಪಾಟೀಲ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶರಣ ಪರಂಪರೆಯ ಅಗ್ರಗಣ್ಯ ಶರಣರಾದ ಹಡಪದ ಅಪ್ಪಣ್ಣನವರು ಕಾಯಕ ಯೋಗಿಯಾಗಿ ಅನೇಕ ಅನುಭವದ ವಚನಗಳನ್ನು ಬರೆದಿದ್ದಾರೆ. ಅವರ ವಚನಗಳಲ್ಲಿ ಸಮಾನತೆಯ ಸಾರ ಅಡಗಿದೆ ಎಂದರು.

ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ. ಮಾತನಾಡಿ, 12ನೇ ಶತಮಾನದ ಎಲ್ಲ ವಚನಕಾರರು ಜಾತಿ, ಧರ್ಮ ಮರೆತು ಸಮಾನತೆಯಿಂದ ಜೀವನ ನಡೆಸಿದರು. ದರ್ಶನಿಕರ ವಚನಗಳು ನಮ್ಮ ಜೀವನಕ್ಕೆ ಮಾರ್ಗದರ್ಶಿ ಎಂದರು.

ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆ.ಇ. ಬೋರ್ಡ್ ಪ್ರೌಢಶಾಲೆಯ ಶಿಕ್ಷಕ ಸಂಗಮೇಶ ಹಡಪದ ಅವರು `ಶಿವಶರಣ ಶ್ರೋ ಹಡಪದ ಅಪ್ಪಣ್ಣ ಅವರ ಜೀವನ ಹಾಗೂ ಸಾಮಾಜಕ್ಕೆ ಅವರು ನೀಡಿದ ಕೊಡುಗೆಗಳು' ವಿಷಯ ಕುರಿತು ಉಪನ್ಯಾಸ ನೀಡಿದರು.

ಸಮಾಜದ ಮುಖಂಡರಾದ ಈರಣ್ಣ ಚಿಕ್ಕಬೆಳ್ಳಿಕಟ್ಟಿ, ನಿಂಗರಾಜ ಹಡಪದ, ಮಾರುತಿ ಹಡಪದ, ಈರಣ್ಣ ಹಡಪದ, ಫಕ್ಕೀರಪ್ಪ ಮೂಲಿಮನಿ, ಶಿವಕುಮಾರ ಅಣ್ಣಿಗೇರಿ, ನಾಗರಾಜ ಅಂಗಡಿ, ಮಲ್ಲಪ್ಪ ಹಡಪದ, ಇತರರಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್ ಗಳಿಸಿರುವ ರಾಜೇಶ್ವರಿ ಮಂಜುನಾಥ ಹಡಪದ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net