ಶಿವಶರಣರನ್ನು ಜಾತಿಗೆ ಸೀಮಿತಗೊಳಿಸದಿರಿ

CTD 10 HADAPAD APPANA JAYNTI-JILLADALITA
Published on

ಚಿತ್ರದುರ್ಗ: ಸಮಾಜ ಸುಧಾರಣೆಗೆ ಶ್ರಮಿಸಿದ ಶಿವಶರಣರ ಕೊಡುಗೆ ಹಾಗೂ ವಚನಗಳನ್ನು ಕುರಿತಂತೆ ಇವತ್ತಿನ ಪೀಳಿಗೆಯಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ಅವರ ಜಯಂತಿಗಳನ್ನು ಆಚರಿಸುತ್ತಿದೆ. ಇಂತಹ ಶರಣರನ್ನು ಜಾತಿಗೆ ಸೀಮಿತಗೊಳಿಸಬಾರದು ಎಂದು ತಹಸೀಲ್ದಾ ರ್ ಗೋವಿಂದರಾಜು ಹೇಳಿದರು.

ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ನಿಜಸುಖಿ ಶಿವಶರಣ ಎಂಬ ಅನ್ವರ್ಥ ನಾಮ ಹೊಂದಿದ್ದ ಹಡಪದ ಅಪ್ಪಣ್ಣ ಹಾಗೂ ಅವರ ಧರ್ಮಪತ್ನಿ ಲಿಂಗಮ್ಮ ಅವರು ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು. ಬಸವಣ್ಣನವರು ಕಲ್ಯಾಣದ ಪ್ರಧಾನ ಮಂತ್ರಿಯಾಗಿದ್ದ ವೇಳೆ ಅಪ್ಪಣ್ಣ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು ಎಂದರು.

ದಕ್ಷಿಣ ಕರ್ನಾಟಕ ಭಾಗದಲ್ಲಿ ಹಡಪದ ಸಮಾಜದವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹಿಂದು ಲಿಂಗಾಯತ, ವೀರಶೈವ ಲಿಂಗಾಯತ ಎಂದು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ. ಹಡಪದ ಸಮಾಜದವರು, ಹಡಪದ, ಕ್ಷೌರಿಕ ಅಥವಾ ಸವಿತಾ ಸಮಾಜ ಎಂದು ಜಾತಿ ಪ್ರಮಾಣ ಪತ್ರ ಪಡೆಯಲು ಬಯಸಿದರೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಜಾತಿ ಗುಣಲಕ್ಷಣಗಳು, ಸಂಪ್ರದಾಯ, ಪೂಜಾ ವಿಧಿ ವಿಧಾನ, ವೈವಾಹಿಕ ಸಂಬಂಧ, ಗ್ರಾಮಸ್ಥರ ಹೇಳಿಕೆ ಪಡೆದು ಜಾತಿ ಪ್ರಮಾಣ ಪತ್ರಗಳನ್ನು ಸರಿಪಡಿಸಲಾಗುವುದು ಎಂದರು.

ಮುರುಘಾ ಮಠದ ಶ್ರೀ ಮುರಿೇಂದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನವರಷ್ಟೇ ಹಡಪದ ಅಪ್ಪಣ್ಣ ಸಹ ಮೇಧಾವಿಯಾಗಿದ್ದರು. ಕಲ್ಯಾಣ ಕ್ರಾಂತಿಯ ವೇಳೆಯಲ್ಲೂ ಅಪ್ಪಣ್ಣ ಬಸವಣ್ಣನವರಿಗೆ ಬೆನ್ನೆಲುಬಾಗಿ ನಿಂತಿದ್ದರು ಎಂದರು.

ಚಿತ್ರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಿ.ಒ. ಸದಾಶಿವ ಅಪ್ಪಣ್ಣ ಅವರ ಕುರಿತು ಉಪನ್ಯಾಸ ನೀಡಿದರು. ಕ್ರಿ.ಶ. 1134ರಲ್ಲಿ ಬಸವನ ಬಾಗೇವಾಡಿ ಸಮೀಪದ ಮಸಬಿನಾಳ ಗ್ರಾಮದಲ್ಲಿ ಚನ್ನವೀರಪ್ಪ ಹಾಗೂ ದೇವಅಕ್ಕಮ್ಮ ಅವರ ಮಗನಾಗಿ ಅಪ್ಪಣ್ಣ ಜನಿಸಿದರು. ಇವರ ಮೂಲ ಹೆಸರು ಜೀವಣ್ಣ. ಪೈಲ್ವಾನ್ ಜೀವಣ್ಣ ಎಂದು ಪ್ರಸಿದ್ಧರಾಗಿದ್ದರು. ಬಸವಪ್ರಿಯ ಕೂಡಲ ಚನ್ನಬಸವಣ್ಣ ಎಂಬ ಅಂಕಿತನಾಮದಿಂದ ಇವರು ರಚಿಸಿರುವ 333 ವಚನಗಳು ಲಭ್ಯವಾಗಿವೆ. ಲಿಂಗಮ್ಮ ಅವರ 113 ವಚನಗಳು ಲಭ್ಯವಾಗಿವೆ. ಸರ್ಕಾರ ಮಸಬಿನಾಳ ಗ್ರಾಮದ ಅಪ್ಪಣ್ಣನವರ ಮನೆಯನ್ನು ಜೀರ್ಣೋದ್ಧಾರ ಮಾಡಬೇಕು ಎಂದರು.

ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ವೃಷಭೇಂದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಡಪದ ಸಮಾಜದವರು ಇದ್ದಾರೆ. ಇವರಿಗೆ ಹಿಂದು ಲಿಂಗಾಯತ, ಹಿಂದು ವೀರಶೈವ ಲಿಂಗಾಯತ ಎಂದು ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಇದರಿಂದ ಸರ್ಕಾರದ ಸವಲತ್ತುಗಳನ್ನು ಪಡೆಯಲು ತೊಂದರೆಯಾಗುತ್ತಿದೆ. ಜಿಲ್ಲಾಡಳಿತ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಹೊಸದುರ್ಗ ತಾಲೂಕು ಪೀಲಾಪುರ ಕಂಠೇಶ್ ತಂಡ ಗೀತಗಾಯನ ನಡೆಸಿಕೊಟ್ಟಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಸ್ವಾಗತಿಸಿದರು. ಆಕಾಶವಾಣಿ ಡಾ.ನವೀನ್ ಮಸ್ಕಲ್ ನಿರೂಪಿಸಿದರು. ಪ್ರಭಾರ ಎಎಸ್‌ಪಿ ಉಮೇಶ್ ಈಶ್ವರ ನಾಯ್ಕ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೆ. ನಾಗರಾಜ, ಕಾರ್ಯದರ್ಶಿ ಎಲ್.ಆರ್. ವೀರಭದ್ರಪ್ಪ ಲೋಕದೊಳಲು, ಈಚಲನಾಗೇನಹಳ್ಳಿ ಮಠದ ಗೋವಿಂದ ಸ್ವಾಮೀಜಿ ಇತರರು ಇದ್ದರು.

ವಚನ ಚಳವಳಿಯಲ್ಲಿ ಹಡಪದ ಅಪ್ಪಣ್ಣ ಪಾತ್ರ ಹಿರಿದು

ಪ್ರತಿ ಸಮಾಜವೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅವಕಾಶಗಳನ್ನು ಪಡೆದು ಮುಖ್ಯವಾಹಿನಿಗೆ ಬರಲು ಸಂವಿಧಾನ ಅವಕಾಶ ಒದಗಿಸಿದೆ ಎಂದು  ಚಿತ್ರದುರ್ಗ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.

ಶ್ರೀಮಠದ ಮುರುಗಿ ಶಾಂತವೀರ ಸ್ವಾಮೀಜಿ ಲೀಲಾ ವಿಶ್ರಾಂತಿ ತಾಣದಲ್ಲಿ ಗುರುವಾರ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಗುರುಪೂರ್ಣಿಮೆ ದಿನದಂದೇ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಿಸುತ್ತಿ ರುವುದು ಔಚಿತ್ಯಪೂರ್ಣವಾಗಿದೆ. ವಚನ ಚಳವಳಿಯಲ್ಲಿ ಹಡಪದ ಅಪ್ಪಣ್ಣ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. 250ಕ್ಕೂ ಹೆಚ್ಚು ವಚನಗಳನ್ನು ಅಪ್ಪಣ್ಣಪ್ರಿಯ ಚನ್ನಬಸವಣ್ಣ ಎಂಬ ಅಂಕಿತನಾಮದಿಂದ ರಚಿಸಿದ್ದಾರೆ ಎಂದರು.

ಶ್ರೀ ಮುರುಘೇಂದ್ರ ಸ್ವಾಮೀಜಿ, ಹರಗುರು ಚರಮೂರ್ತಿಗಳು, ವಕೀಲ ಸಾಯಿನಾಥ್, ಆರ್. ಶ್ರೀನಿವಾಸ್, ಗೋಪಿನಾಥ್, ಗೋವಿಂದರಾಜ್, ವಿ. ಧರ್ಮಣ್ಣ, ವೀರೇಶ್, ವಿಶ್ವನಾಥಸ್ವಾಮಿ, ರುದ್ರಪ್ಪ ಗೌಳಿಜಾಲಿಕಟ್ಟೆ, ಟಿ.ವಿ. ಮುರುಗೇಶ್, ಶ್ರೀನಿವಾಸ್, ಅನಿತಾ ಮುರುಗೇಶ್, ಮಂಜುನಾಥ, ನಾಗರಾಜ್‌ಸಂಗಂ, ಕೆಂಚವೀರಪ್ಪ, ಹನುಮಂತಪ್ಪ, ವೀರೇಶ್ ತಿಮ್ಮಪ್ಪಯ್ಯನಹಳ್ಳಿ, ನಂದೀಶ್, ಎಚ್. ಕುಬೇರಪ್ಪ, ಶಂಕರಪ್ಪ, ಮಹಾಂತಮ್ಮ, ಗೀತಾರುದ್ರೇಶ್, ಜಯಶೀಲಾ ವೀರಣ್ಣ, ಜಯಪ್ಪ ಸೇರಿ ವಿವಿಧ ಸಮಾಜಗಳ ಮುಖಂಡರು, ಪ್ರಾಧ್ಯಾಪಕ ಎಸ್.ಆನಂದ್, ಆಕಾಶವಾಣಿಯ ಶಿವಪ್ರಕಾಶ್, ಪ್ರಾಚಾರ್ಯ ಡಾ.ಎಲ್. ಈಶ್ವರಪ್ಪ ಇತರರು ಇದ್ದರು.

ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಟಿ. ಎಸ್. ಗಿರೀಶ್ ಸ್ವಾಗತಿಸಿ, ಮಧು ವಂದಿಸಿದರು. ಸಿ.ಎಂ. ವಿಶ್ವನಾಥ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net