ಧರ್ಮಸ್ಥಳ ಷಡ್ಯಂತ್ರ ವಿರುದ್ಧ ಶಿವಪಂಚಾಕ್ಷರಿ ಮಂತ್ರ

New VHP New
Published on

ಹುಬ್ಬಳ್ಳಿ : ಹಿಂದುಗಳ ಶ್ರದ್ಧಾ ಕೇಂದ್ರ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ, ಷಡ್ಯಂತ್ರ ದೂರವಾಗಿ, ಕ್ಷೇತ್ರದ ಬಗ್ಗೆ ಶ್ರದ್ಧೆ, ಭಕ್ತಿ ಹೆಚ್ಚಾಗಲಿ ಎಂಬ ಸಂಕಲ್ಪದೊಂದಿಗೆ ಸಾಮೂಹಿಕ ಶಿವಪಂಚಾಕ್ಷರಿ ಓಂ ನಮಃ ಶಿವಾಯ ಜಪ ಪಠಿಸಲು ವಿಶ್ವ ಹಿಂದು ಪರಿಷತ್ ಕರೆ ನೀಡಿದೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿಶ್ವಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಸಹ ಕಾರ್ಯದರ್ಶಿ ವಿನಾಯಕ ತಲಗೇರಿ, ಸೋಮವಾರವೇ ಜಪಾನುಷ್ಠಾನ ಆರಂಭಿಸಲಾಗಿದೆ. ವಾರ ಕಾಲ ನಡೆಯುವ ಮಂತ್ರ ಪಠಣದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.

ಧರ್ಮಸ್ಥಳಕ್ಕೆ ಧಕ್ಕೆ ತರುತ್ತಿರುವವರ ವಿರುದ್ಧ ಹಿಂದುಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಉತ್ತರ ಕರ್ನಾಟಕದ 153 ತಾಲೂಕು ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹುಬ್ಬಳ್ಳಿಯ ಸ್ಟೇಶನ್ ರಸ್ತೆಯ ಈಶ್ವರ ದೇವಸ್ಥಾನ ಸೇರಿದಂತೆ 10 ಸ್ಥಳಗಳಲ್ಲಿ ಶಿವಪಂಚಾಕ್ಷರಿ ಮಂತ್ರ ಪಠಣ ಸಂಜೆ 6ರಿಂದ 7 ಗಂಟೆವರೆಗೆ ನಡೆಯಲಿದೆ ಎಂದರು.

ಧರ್ಮಸ್ಥಳ ವಿಷಯದಲ್ಲಿ ತನಿಖೆ ನೆಪದಲ್ಲಿ ಸರ್ಕಾರದ ಹಿಂದು ವಿರೋಧಿ ಒಳಸಂಚು ರೂಪಿಸಿದೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಧರ್ಮಸ್ಥಳ ಧಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಮಸಿ ಬಳೆಯುವ ಕೆಲಸ ನಡೆಯುತ್ತಿದ್ದು, ಭಕ್ತರ ಮನಸಿಗೆ ನೋವಾಗಿದೆ ಎಂದು ಹೇಳಿದರು.

ಧಾರ್ವಿುಕ ಶ್ರದ್ಧಾ ಕೇಂದ್ರದ ಮೇಲೆ ಭಕ್ತರಲ್ಲಿ ಅಪನಂಬಿಕೆ ಬರಬಾರದು ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದೇ ರೀತಿ ಅಪಪ್ರಚಾರ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಕೆ. ಗೋವರ್ಧನರಾವ್ ಮಾತನಾಡಿ, ಧರ್ಮಸ್ಥಳ ಪ್ರಕರಣ ಕುರಿತು ಎಸ್​ಐಟಿ ತನಿಖೆ ನಡೆಯುತ್ತಿದೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ಈ ಮೂಲಕ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಇದರ ಹಿಂದೆ ಕ್ರಿಶ್ಚಿಯನ್ ಮಿಷನರಿಗಳು ಹಾಗೂ ಕೆಲವು ಮುಸ್ಲಿಂ ಸಂಘಟನೆಗಳ ಪಿತೂರಿ ಇದೆ ಎಂದು ಆರೋಪಿಸಿದರು.

ಪಿತೂರಿ ಹಿಂದಿರುವವರ ಬಗ್ಗೆ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಹಿಂದು ಧಾರ್ವಿುಕ ಕೇಂದ್ರಗಳ ಬಗ್ಗೆ ಯಾರೊಬ್ಬರೂ ಅಪಪ್ರಚಾರ ಮಾಡುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.

ಧರ್ಮಸ್ಥಳದಲ್ಲಿ ಜೈನ ಸಮುದಾಯದ ಆಡಳಿತವಿದ್ದರೂ ಅಲ್ಲಿ ಶಿವನ ಆರಾಧನೆ ನಡೆಯುತ್ತಿದೆ. ಅಲ್ಲಿರುವ ಪೂಜಾರಿಗಳು ಮಾಧ್ವ ಸಂಪ್ರದಾಯದವರು. ಇದು ಸಮನ್ವಯ ಧಾರ್ವಿುಕ ಕೇಂದ್ರವಾಗಿದೆ. ಹಿಂದು ಸಮಾಜ ಒಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದನ್ನು ವಿಶ್ವ ಹಿಂದು ಪರಿಷತ್ ಸಹಿಸುವುದಿಲ್ಲ ಎಂದು ತಿಳಿಸಿದರು.

ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ರಘು ಯಲ್ಲಕ್ಕಣ್ಣವರ, ಪ್ರದೀಪ ಶೆಟ್ಟಿ, ಶಿವಾನಂದ ಸತ್ತಿಗೇರಿ, ಮಲ್ಲಿಕಾರ್ಜುನ ಸತ್ತಿಗೇರಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net