ಶಿವ ಪಂಚಾಕ್ಷರಿ ಭಜನಾ ಸಪ್ತಾಹ 6ರಿಂದ

2hub-dwd1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ದೇವರಹುಬ್ಬಳ್ಳಿ ಸಿದ್ಧಾರೂಢ ಮಠದ ಶಿವ ಪಂಚಾಕ್ಷರಿ ಭಜನಾ ಸಪ್ತಾಹ ಮತ್ತು ಜಾತ್ರಾ ಮಹೋತ್ಸವ ಮಾ. 6 ರಿಂದ 10ರ ವರೆಗೆ ನಡೆಯಲಿದೆ.

ಮಾ. 6 ರಂದು ಬ್ರಾಹ್ಮೀ ಮುಹೂರ್ತದಲ್ಲಿ ಶಿವಮಹಿಮ್ನದೊಂದಿಗೆ ಸಪ್ತಾಹ ಆರಂಭವಾಗಿ ಸತತ ಐದು ದಿನಗಳ ಕಾಲ ದಿನದ 24 ಗಂಟೆ ಶಿವನಾಮ ಸ್ಮರಣೆ ಭಜನಾ ಸಪ್ತಾಹ ನಡೆಯಲಿದೆ. 6ನೇ ದಿನ ಬೆಳಗ್ಗೆ ಕೌದಿ ಪೂಜೆಯೊಂದಿಗೆ ಕಾರ್ಯಕ್ರಮಗಳು ಮುಕ್ತಾಯವಾಗುತ್ತವೆ.

ಮಾ. 6ರಂದು ರಾತ್ರಿ 8 ಗಂಟೆಗೆ ಕುಟುಂಬದ ಹಿರಿಯರ ಪಾದಪೂಜೆ ನಡೆಯಲಿದ್ದು, ಕುಟುಂದ ಸ್ವಾಸ್ಥ್ಯ ಮತ್ತು ರಾಷ್ಟ್ರಹಿತ ಎಂಬ ವಿಷಯ ಕುರಿತು ಪ್ರವಚನ ನಡೆಯಲಿದೆ. ಆರ್​ಎಸ್​ಎಸ್​ನ ಹಿರಿಯ ಪ್ರಚಾರಕ ಸು. ರಾಮಣ್ಣ ಮತ್ತು ಮಕ್ಕಳ ತಜ್ಞ ಡಾ.ಗುರುನಾಥ ಪಾಟೀಲ ಉಪನ್ಯಾಸ ನೀಡಲಿದ್ದು, ಚಿಕ್ಕೋಡಿಯ ಸಂಪದಾನ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಮಾ.7ರಂದು ದೇವಿ ಪುರಾಣ ಪಠಣ ನಡೆಯಲಿದ್ದು, ಸಿಂಧೋಗಿ-ಮುನವಳ್ಳಿ ನಿತ್ಯಾನಂದ ಮಠದ ಮುಕ್ತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾ.8 ರಂದು ಬೆಳಗ್ಗೆ 8 ಗಂಟೆಗೆ ಗೋವು ಉತ್ಪನ್ನಗಳ ತಯಾರಿಕಾ ತರಬೇತಿ ಹಮ್ಮಿಕೊಳ್ಳಲಾಗಿದೆ. ಮಾ. 9ರಂದು ರಕ್ತದಾನ ಶಿಬಿರ ನಡೆಯಲಿದೆ.

ಮಾ.10 ರಂದು ನಮ್ಮ ಸನಾತನ ಧರ್ಮ ಪರಂಪರೆ ಉಳಿಸಿ ಬೆಳೆಸಲು ಇಂದಿನ ಪೀಳಿಗೆಯ ಜವಾಬ್ದಾರಿ ಎಂಬ ವಿಷಯ ಕುರಿತು ಹಿರಿಯ ವೈದ್ಯ ಹಾಗೂ ತಜ್ಞ ಡಾ.ಹನಮಂತರಾವ್​ ಮಳಲಿ ಉಪನ್ಯಾಸ ನೀಡಲಿದ್ದಾರೆ. ಕೀರ್ತನ ಕೇಸರಿ ದಿಗಂಬರ ಶಾಸ್ತ್ರಿಗಳು ಕೀರ್ತನ ನಡೆಸಿಕೊಡಲಿದ್ದಾರೆ. ನಿತ್ಯವೂ ರಾಷ್ಟ್ರಜಾಗೃತಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಸಿದ್ದಾಶ್ರಮದ ಶ್ರೀ ಸಿದ್ದಶಿವಯೋಗಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಕೊನೇ ದಿನ ಸಿದ್ಧಾರೂಢರು ಮತ್ತು ಅವರ ಶಿಷ್ಯರಾದ ನಾಗಭೂಷಣ ಶಿವಯೋಗಿಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net