ಸದಾಶಿವ ಧ್ಯಾನದೊಂದಿಗೆ ದೈನಂದಿನ ಕಾರ್ಯ : ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಸಲಹೆ

New Project (2)
Published on

ಬದಿಯಡ್ಕ: ಸದಾಶಿವನನ್ನು ಸದಾ ನೆನೆಯುತ್ತಾ ನಮ್ಮ ದೈನಂದಿನ ಕಾರ್ಯ ಮುಂದುವರಿಯಬೇಕು. ಸತ್ಕಾರ್ಯ ಮಾಡುತ್ತಾ ವೈಯಕ್ತಿಕ ಸಾಧನೆಗಳನ್ನು ಶಿಸ್ತುಬದ್ಧವಾಗಿ ಮಾಡಬೇಕು. ಭಜನೆ ಮನಸ್ಸನ್ನು ಶುದ್ಧೀಕರಿಸಿದರೆ ಕುಣಿತ ಭಜನೆಯು ದೇಹದ ಕಲ್ಮಶ ದೂರಗೊಳಿಸುತ್ತದೆ. ಏತಡ್ಕವೆಂಬ ಕುಗ್ರಾಮದಲ್ಲಿ ಅದ್ಭುತ, ವಿಶಿಷ್ಟ ಯೋಚನೆಗಳ ಮೂಲಕ ಭಗವದ್ಭಕ್ತರನ್ನು ದೇವಸ್ಥಾನದೊಂದಿಗೆ ಜೋಡಿಸಿದ್ದಾರೆ. ಈ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡ ಎಲ್ಲರೂ ಪುಣ್ಯವಂತರು ಎಂದು ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಹೇಳಿದರು.

ಮಧ್ವಾದೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮುಂದಾಳುತ್ವದಲ್ಲಿ ಏತಡ್ಕ ಶ್ರೀ ಸದಾಶಿವ ದೇವಸ್ಥಾನದದಲ್ಲಿ ಶಿವನಾಮಾರ್ಚನೆ ಸಾಂಬಸದಾಶಿವ ಭಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ.ಶಾಮ ಭಟ್ ಬೆಂಗಳೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅತಿಕಡಿಮೆ ಸಮಯದಲ್ಲಿ ದೇವರ ಕಾರ್ಯವನ್ನು ಸುಸೂತ್ರವಾಗಿ ನಡೆಸಿಕೊಡುವಲ್ಲಿ ನಾಡಿನ ಜನರ ಪಾತ್ರವನ್ನು ಮರೆಯುವಂತಿಲ್ಲ. ಶಿವಾರ್ಪಣಂ ಕಾರ್ಯದ ಮೂಲಕ ಬ್ರಹ್ಮಕಲಶೋತ್ಸವದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಿದೆ ಎಂದರು.

ಭಜನಾ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ, ಮಾತೃಸಮಿತಿಯ ಅಧ್ಯಕ್ಷೆ ಉಷಾ ಶ್ಯಾಮ ಭಟ್, ಭಜನಾ ಸಂಕೀರ್ತನೆಯ ಸಂಯೋಜಕಿ ಉಷಾ ಶಿವರಾಮ ಭಟ್ ಉಪಸ್ಥಿತರಿದ್ದರು. ಸಮಿತಿಯ ಸಂಚಾಲಕರಾದ ಚಂದ್ರಶೇಖರ ಏತಡ್ಕ ಹಾಗೂ ಡಾ.ವೈ.ವಿ.ಕೃಷ್ಣಮೂರ್ತಿ, ವೈ.ವಿ.ರಮೇಶ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಅಕ್ಷರಮಾಲಾ ಸ್ತೋತ್ರದೊಂದಿಗೆ ಪ್ರದಕ್ಷಿಣೆ

ಶ್ರೀ ಸದಾಶಿವ ದೇವಸ್ಥಾನದ ಮೊದಲ ಬ್ರಹ್ಮಕಲಶೋತ್ಸವ ನಡೆಸಿದ ಏತಡ್ಕ ಸುಬ್ರಾಯ ಭಟ್ಟರ ಪ್ರೀತಿಯ ಭಜನೆಯಾದ ಶ್ರೀ ಶಂಕರಾಚಾರ್ಯ ವಿರಚಿತ ಅಕ್ಷರಮಾಲಾ ಸ್ತೋತ್ರ ಹಾಡುತ್ತಾ, ಕುಣಿಯುತ್ತಾ ದೇವರಿಗೆ ಪ್ರದಕ್ಷಿಣೆ ನಡೆಸಲಾಯಿತು. ಅ ಅಕ್ಷರದಿಂದ ಅದ್ಭುತ ವಿಗ್ರಹ ಅಮರಾಧೀಶ್ವರ ಎಂದು ಆರಂಭವಾಗುವ ಭಜನೆ ಲಾಳಿತ ಭಕ್ತಜನೇಶ ಎಂದು ಕೊನೆಗೊಳ್ಳುತ್ತದೆ. ರಾಮಕೃಷ್ಣ ಕಾಟುಕುಕ್ಕೆ ಹಾಡನ್ನು ಅದ್ಭುತವಾಗಿ ಹಾಡಿ ಜನಮನಸೂರೆಗೊಂಡರು. ಹಾರ್ಮೋನಿಯಂನಲ್ಲಿ ಸತ್ಯನಾರಾಯಣ ಐಲ, ಜಗದೀಶ್ ಉಪ್ಪಳ ಜತೆಗೂಡಿದರು. ಯುವ ಚಿತ್ರಕಲಾವಿದೆ ಶ್ರೀಲಕ್ಷ್ಮೀ ಕುಳೂರು ಕುಂಚದಲ್ಲಿ ಹಾಡಿನೊಂದಿಗೆ ಸದಾಶಿವ ಚಿತ್ರರಚನೆ ಮೂಲಕ ಗಮನಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net