

ಮಂಡ್ಯ: ಶಿವ ಜಯಂತಿ ಅಂಗವಾಗಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 21 ಅಡಿ ಎತ್ತರದ ರುದ್ರಾಕ್ಷಿ ಶಿವಲಿಂಗ ಪುಣ್ಯದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶಿವಲಿಂಗ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಾ.7ರಿಂದ 12ರವರೆಗೆ ಬೆಳಗ್ಗೆ 7ಗಂಟೆಯಿಂದ ರಾತ್ರಿ 9ಗಂಟೆವರೆಗೆ ಹೋಲೋಗ್ರಾಂ ಶಿವಲಿಂಗ ಮತ್ತು ಸಹಸ್ರ ಶಿವಲಿಂಗದ ದರ್ಶನ ಮಾಡಬಹುದು. ಪ್ರವೇಶ ಉಚಿತವಾಗಿದೆ. ಇನ್ನು 21 ಅಡಿ ಎತ್ತರದ ರುದ್ರಾಕ್ಷಿ ಶಿವಲಿಂಗ ಹಾಗೂ ಶಿವನ ವಾಹನ ನಂದಿ ನೋಡುಗರ ಗಮನಸೆಳೆಯುತ್ತಿದೆ. 3.50 ಲಕ್ಷ ರುದ್ರಾಕ್ಷಿ ಮಣಿಯಿಂದ ಶಿವಲಿಂಗ ನಿರ್ಮಾಣ ಮಾಡಲಾಗಿದೆ.
ಪ್ರದರ್ಶನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಮಹಾ ಶಿವರಾತ್ರಿ ಎಂದರೆ ಪ್ರತಿಯೊಬ್ಬರಿಗೂ ವಿಶೇಷವಾದಂತಹ ದಿನ. ದೇವರನ್ನು ಸ್ಮರಿಸಿಕೊಂಡು ನಮ್ಮ ದಿನನಿತ್ಯದ ಕೆಲಸ ಮಾಡಿ ಸೇವೆ ಮಾಡಬೇಕು. ಹಬ್ಬದ ದಿನ ಉಪವಾಸ ಮಾಡಿ ಶಿವನನ್ನು ಧ್ಯಾನ ಮಾಡಿದರೆ ಒಳಿತಾಗಲಿದೆ ಎನ್ನುವ ನಂಬಿಕೆ ಇದೆ. ಕಲುಷಿತ ಮನಸ್ಸನ್ನು ಶುದ್ದಿ ಮಾಡಿಕೊಳ್ಳಬೇಕು ಎಂದರೆ ಇಂತಹ ಪವಿತ್ರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ವಿಶ್ವವಿದ್ಯಾಲಯದ ಜಿಲ್ಲಾ ಮುಖ್ಯಸ್ಥೆ ಬಿ.ಕೆ.ಶಾರದಾ ಇತರರಿದ್ದರು.