ಆದಿ-ಅಂತ್ಯವಿಲ್ಲದ ನಿರಾಕಾರ ಸ್ವರೂಪವೇ ಶಿವ

Shiva is the formless form without beginning or end
Published on

ಲಕ್ಷ್ಮೇಶ್ವರ: ಅಜ್ಞಾನ ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ಬದುಕಿನಲ್ಲಿ ಬೆಳಗಿಸು ಎಂದು ಶಿವನನ್ನು ಉಪವಾಸ, ಜಪ, ತಪ, ಪೂಜೆ, ಸ್ಮರಣೆ, ಭಜನೆಯ ಮೂಲಕ ಪ್ರಾರ್ಥಿಸುವ ಶುಭ ದಿನವೇ ಶಿವರಾತ್ರಿ ಎಂದು ಪಿಎಸ್‌ಐ ನಾಗರಾಜ ಗಡಾದ ಹೇಳಿದರು.

ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹೆಸರಾಂತ ಕಲಾವಿದರು ಹಾಗೂ ಪುಲಿಗೇರಿಯ ಕಲಾ ಮನಸುಗಳಿಂದ ಬುಧವಾರ ಆಯೋಜಿಸಿದ್ದ ಕ್ಯಾನ್ವಾಸ್‌ನಲ್ಲಿ ಶಿವ ಸ್ವರೂಪದ ಚಿತ್ರ ರಚನೆಯ ಮೂಲಕ ಚಿತ್ರ ಧ್ಯಾನ ಮಾಡೋಣ ಬನ್ನಿರಿ ಎಂಬ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಣ್ಣಿಗೆ ಕಾಣದ, ಭಾವಕ್ಕೆ ಮೀರಿದ ಆದಿ-ಅಂತ್ಯವಿಲ್ಲದ ನಿರಾಕಾರ ಸ್ವರೂಪದ ಚೇತನ ಶಕ್ತಿಯೇ ಶಿವ ಪರಮಾತ್ಮ. ಶಿವರಾತ್ರಿಯ ಶುಭ ಗಳಿಗೆಯಲ್ಲಿ ಶಿವನನ್ನು ನಮ್ಮದೇ ಆದ ಶ್ರೇಷ್ಠ ಕಾರ್ಯದ ಮೂಲಕ ಶ್ರದ್ದೆ, ಭಕ್ತಿ, ತನ್ಮಯತೆಯಿಂದ ಧ್ಯಾನಿಸಿದರೆ ದೇಹ ಹಾಗೂ ಮನಸಿಗೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ. ಶಿವ ದೇಗುಲಗಳಲ್ಲಿ ಪೂಜೆ, ಪ್ರಾರ್ಥನೆ, ಭಜನೆ, ಮಂತ್ರ, ಹೋಮ, ಯಾಗದ ಮೂಲಕ ಅಂತರಾತ್ಮಕ್ಕೆ ಶಿವನ ಇರುವಿಕೆಯ ಅರಿವಾಗುವಂತೆ ಮಾಡುವ ಶಿವಧ್ಯಾನವನ್ನು ಶಿವನ ವಿವಿಧ ಸ್ವರೂಪದ ಚಿತ್ರ ಬಿಡಿಸುವ ಮೂಲಕ ಶಿವಧ್ಯಾನದ ಶ್ರೇಷ್ಠ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು.

ಲಜಾವರ್ ಆರ್ಟ ಫೌಂಡೇಷನ್‌ನ ಚಿತ್ರ ಕಲಾವಿದ, ಶಿಕ್ಷಕ ಪ್ರವೀಣ ಗಾಯಕರ ನೇತೃತ್ವದಲ್ಲಿ ನಡೆದ ಚಿತ್ರ ಧ್ಯಾನ ಕಾರ್ಯಕ್ರಮದಲ್ಲಿ ಕಲಾವಿದರ ಕುಂಚದಿಂದ ಲಾರ್ಡ್ ಶಿವ, ಈಶ್ವರ, ಸೋಮೇಶ್ವರ, ಶಿವಲಿಂಗ, ತ್ರಿಶೂಲ, ನಂದಿ, ಢಮರುಗ, ಶಿವ ಪಾರ್ವತಿ, ಓಂ ನಮಃ ಶಿವಾಯ ಹೀಗೆ ಶಿವನ ವಿವಿಧ ರೂಪಗಳು ಮೂಡಿಬಂದವು. ಈ ವೇಳೆ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಕ್ಯಾನವಾಸ್‌ನಲ್ಲಿ ತಮ್ಮದೇ ಆದ ಶಿವ ಸ್ವರೂಪದ ಚಿತ್ರ ಬಿಡಿಸಿ, ಶಿವನ ಹೆಸರು ಬರೆದು ಧ್ಯಾನಿಸಿದ್ದು ಕಂಡುಬಂದಿತು.

ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ದೇವಸ್ಥಾನ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಮುಖ್ಯಾಧಿಕಾರಿ ಮಹೇಶ ಹೆಚ್, ಸದಸ್ಯರಾದ ಅಶ್ವಿನಿ ಅಂಕಲಕೋಟಿ, ಪ್ರವೀಣ ಬಾಳಿಕಾಯಿ, ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಚನ್ನಪ್ಪ ಜಗಲಿ, ಸಿ.ಜಿ. ಹಿರೇಮಠ, ಮಾಲಾದೇವಿ ದಂದರಗಿ, ವಿರೂಪಾಕ್ಷ ಆದಿ, ಬಸವರಾಜ ಮೆಣಸಿನಕಾಯಿ, ನಾಗರಾಜ ಕಳಸಾಪುರ, ಎಸ್.ಎ. ಬೆಟಗೇರಿ ಮತ್ತು ಕಲಾವಿದರಾದ ರಾಜೇಶ ಉಮಚಗಿ, ಸಂತೋಷ ಕ್ಯಾದಿಗೇರಿ, ಗಂಗಾಧರ ಬಂಡಾನವರ, ಚೇತನ ಹತ್ತಿಕಾಳ, ಅರುಣ ತೊರಗಲ್, ಪ್ರಕಾಶ ಕುಂಬಾರ, ಅಶ್ವಿನಿ ಹಿರೇಮಠ, ಅಂಬಿಕಾ ಮಾದಾಪುರಮಠ, ಮಾಂತೇಶ ಕಾಶಿಕೋವಿ, ಶಿವು ಆರೇರ, ಶರಣು ಶಿವಸಿಂಪಗೇರ, ರಮೇಶ ಗಾರವಾಡ, ಅಭಿಷೇಕ ಕುಂಬಾರ, ಎಸ್.ಬಿ. ತೆಳಗಿನಮನಿ ಸೇರಿ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net