

ಗೋಕರ್ಣ: ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರ ಮಂದಿರದ ವತಿಯಿಂದ ಗುರುವಾರ ಪ್ರಾತಃ ಕಾಲದಲ್ಲಿ ಗಂಗಾವಳಿಯ ಶ್ರೀಗಂಗಾಮಾತಾ ಸನ್ನಿಧಿಯಲ್ಲಿ ಮಂದಿರದ ಪ್ರಧಾನ ಅರ್ಚಕ ವೇ. ಗಣಪತಿ ಗ. ಹಿರೇ ಮತ್ತು ಉಪಾಧಿವಂತ ವೈದಿಕರ ನೇತೃತ್ವದಲ್ಲಿ ಶಿವ-ಗಂಗಾ ವಿವಾಹ ನಿಶ್ಚಿತಾರ್ಥ ಮತ್ತು ತಾಂಬೂಲೋತ್ಸವ ಶಾಸ್ತ್ರೋಕ್ತವಾಗಿ ನೆರವೇರಿತು.
ನಿಶ್ಚಿತಾರ್ಥ ನಿಮಿತ್ತ ಬುಧವಾರ ರಾತ್ರಿ ಶ್ರೀದೇವರ ಉತ್ಸವವು ಮಂದಿರದಿಂದ ಹೊರಟು ಮೆರವಣಿಗೆಯಲ್ಲಿ ಸಮುದ್ರ ತೀರದ ಮಾರ್ಗದ ಮೂಲಕ ಗಂಗಾವಳಿಗೆ ಆಗಮಿಸಿತು. ಗುರುವಾರ ಸೂರ್ಯೋದಯಕ್ಕೂ ಮುನ್ನ ಗಂಗಾವಳಿ ನದಿ ಮತ್ತು ಸಮುದ್ರದ ಸಂಗಮ ಸ್ಥಳದಲ್ಲಿ ಪುಣ್ಯ ಸ್ನಾನ ಕೈಗೊಳ್ಳಲಾಯಿತು. ಈ ವೇಳೆ ನದಿಯಲ್ಲಿ ಗಂಗೆಯ ಸಾಕ್ಷಾತ್ ಉದ್ಭವವಾಗುತ್ತದೆ ಎಂಬ ಪ್ರತೀತಿಯ ಹಿನ್ನೆಲೆಯ ಸಾವಿರಾರು ಭಕ್ತರು ಕೂಡ ಗಂಗಾ ಸ್ನಾನ ಕೈಗೊಂಡರು. ನದಿ ಸಂಗಮ ತಾಣದಿಂದ ಶ್ರೀ ಗಂಗಾಮಾತಾ ಸನ್ನಿಧಿಗೆ ಬಿಜಯಂಗೈದ ಉತ್ಸವವು ಅಲ್ಲಿ ಜರುಗಿದ ನಿಶ್ಚಿತಾರ್ಥ ಮತ್ತು ಶಿವ-ಗಂಗಾ ಸಂವಾದದಲ್ಲಿ ಭಾಗವಹಿಸಿತು. ತಾಂಬೂಲ ವಿನಿಮಯದ ತರುವಾಯ ಬರುವ ಅ. 31 ಆಶ್ವೀಜ ಕೃಷ್ಣ ಚತುರ್ದಶಿಯಂದು ಶಿವ-ಗಂಗಾ ವಿವಾಹ ನಿಶ್ಚಿಯಿಸಲಾಯಿತು. ನಂತರದಲ್ಲಿ ಶ್ರೀ ಮಹಾಬಲೇಶ್ವರ ಉತ್ಸವವು ವಿಶೇಷ ಮೆರವಣಿಗೆ ಮತ್ತು ಮಂಗಳವಾದ್ಯಗಳೊಂದಿಗೆ ಮಂದಿರಕ್ಕೆ ವಾಪಸಾಗುವಾಗ ಪರಂಪರಾ ಪದ್ಧತಿಯಂತೆ ಮಹರ್ಷಿ ದೈವರಾತರ ಸಾಗರ ತೀರದ ಆಶ್ರಮಕ್ಕೆ ಭೇಟಿ ನೀಡಿ ಅಷ್ಟಾವಧಾನ ಸೇವೆ ಸ್ವೀಕರಿಸಿತು. ಉತ್ಸವದಲಿ ಮಂದಿರ ಸಮಿತಿ ಸದಸ್ಯ ವೇ. ಸುಬ್ರಹ್ಮಣ್ಯ ಅಡಿ ಮತ್ತು ಪ್ರಮುಖ ಅರ್ಚಕ-ಉಪಾಧಿವಂತರಿದ್ದರು.