ಸುತ್ತೂರು ಶ್ರೀಕ್ಷೇತ್ರದಲ್ಲಿ ಶಿವ ದೀಪೋತ್ಸವ ಸಂಭ್ರಮ

14 njd news 01
ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಲೂರು, ಬರಡನಪುರ, ಕುಂದೂರು, ನೀಲಕಂಠಸ್ವಾಮಿ, ರಾಗಿಬೊಮ್ಮನಹಳ್ಳಿ, ಮಾಗಡಿ ಕಮ್ಮತಗಿ, ದಂಡೀಕೆರೆ, ಕಳ್ಳೀಪುರ, ಕುಂತೂರು, ಪುರ, ಕಲ್ಮಟ, ಮಾಡ್ರಳ್ಳಿ, ನರೆಗ್ಯಾತನಹಳ್ಳಿ ಸ್ವಾಮೀಜಿಗಳು ಭಾಗವಹಿಸಿದ್ದರು. ಎಸ್.ಪಿ.ಮಂಜುನಾಥ, ಎಸ್. ಶಿವಕುಮಾರಸ್ವಾಮಿ, ಎಸ್.ಪಿ.ಉದಯಶಂಕರ್ ಇದ್ದರು.
Published on

ನಂಜನಗೂಡು: ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆ, ಶ್ರೀ ಸೋಮೇಶ್ವರ, ಶ್ರೀ ಮಹದೇಶ್ವರ, ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ನಾರಾಯಣಸ್ವಾಮಿ ದೇವಾಲಯಗಳಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶುಕ್ರವಾರ ಸಂಜೆ ಶಿವದೀಪೋತ್ಸವ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿತು.

ಶಿವದೀಪೋತ್ಸವ ಪ್ರಯುಕ್ತ ಬೆಳ್ಳಿ ರಥದ ಪ್ರಾಕಾರೋತ್ಸವ ಜರುಗಿತು. ಸುತ್ತೂರು ಶಾಲೆ ಮಕ್ಕಳು ಸಾಮೂಹಿಕ ಪ್ರಾರ್ಥನೆ ಮಾಡಿದರು. ಚಿಂತಕ ಡಾ.ಗುಬ್ಬಿಗೂಡು ರಮೇಶ್ ಮಾತನಾಡಿ, ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ಯುವುದೇ ಶಿವದೀಪೋತ್ಸವ. ಜಾಗತೀಕರಣದಿಂದ ಪ್ರಪಂಚದಾದ್ಯಂತ ದ್ವೇಷ, ಅಸೂಯೆ, ಆಕ್ರೋಶ ತುಂಬಿ ತುಳುಕುತ್ತಿದ್ದು ದೇಶ, ದೇಶಗಳ ನಡುವೆ ವೈರತ್ವ ಗುಣಗಳು ಬೆಳೆಯುತ್ತಿವೆ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದ್ದು ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಕುಟುಂಬದ ಹಿರಿಯರಿಗೆ ಗೌರವ ಕೊಡಬೇಕು, ಕಷ್ಟದಲ್ಲಿರುವವರಿಗೆ ಸಹಾಯವನ್ನು ಮಾಡಬೇಕು. ಅತಿಯಾಸೆಯಿಂದ ಮನುಷ್ಯ ಹೊರಬಂದು ಹಂಚಿ ತಿನ್ನುವಂಥ ಮನಸ್ಸನ್ನು ಬೆಳೆಸಿಕೊಳ್ಳಬೇಕು ಹಾಗೂ ಸಂಕುಚಿತ ಮನೋಭಾವ ಬಿಟ್ಟು ವಿಶಾಲ ಹೃದಯ ವೈಶಾಲತೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

12ನೇ ಶತಮಾನದಲ್ಲಿ ಶಿವಶರಣರು ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳು, ವಿಡಂಬಣೆ, ಓರೆಕೋರೆಗಳನ್ನು ತಿದ್ದುವಂಥ ಸತ್ಯಾನ್ವೇಷಣೆಯ ವಾಸ್ತವದ ಬದುಕು ಮತ್ತು ಅನುಭವಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವಚನಗಳ ಮೂಲಕ ತಿಳಿಸಿದರು. ವಚನ ಸಾಹಿತ್ಯ ಇಡೀ ವಿಶ್ವಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯಾಗಿದೆ. ವಚನಗಳಲ್ಲಿ ಬೆಳಕಿದೆ, ಬದುಕಿಗೆ ದಾರಿ ಇದೆ. ನೊಂದವರಿಗೆ ಸಾಂತ್ವನವಿದೆ, ಸಮಸ್ಯೆಗಳಿಗೆ ಉತ್ತರವಿದೆ, ಮಾನವನ ಆತ್ಮೋದ್ಧಾರಕ್ಕೆ ಬೇಕಾದುದೆಲ್ಲಾ ಇದೆ. ಸರ್ವಕಾಲಕ್ಕೂ ವಚನಗಳ ಸಾರಾಂಶ ಒಂದೇ ಆಗಿರುತ್ತದೆ. ಇಂತಹ ವಚನ ಸಾಹಿತ್ಯದಲ್ಲಿ ಬರುವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಸಾಗಿಸಬೇಕು. ಇಂದಿನ ಯುವಕರು ಸಾಮಾಜಿಕ ಜಾಲತಾಣಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿಕೊಳ್ಳಬೇಕು. ಸಂದೇಶಗಳನ್ನು ರವಾನೆ ಮಾಡುವಾಗ ಸಂಸ್ಕೃತಿ, ಮೌಲ್ಯಗಳು, ಆಧ್ಯಾತ್ಮಿಕ, ಧಾರ್ಮಿಕ ವಿಚಾರಗಳಿಗೆ ಒತ್ತು ನೀಡಿ, ಲೋಕ ಕಲ್ಯಾಣಕ್ಕಾಗಿ ಉಪಯೋಗವಾಗುವಂಥ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದು ನುಡಿದರು.

ಶಿವ ದೀಪೋತ್ಸವ ಅಂಗವಾಗಿ ದೇವಾಲಯಗಳಿಗೆ ಮಾಡಿದ್ದ ವಿಶೇಷ ದೀಪಾಲಂಕಾರ ಎಲ್ಲರ ಕಣ್ಮನ ಸೆಳೆಯಿತು. ಬಾಣ, ಬಿರುಸುಗಳು ಆಕಾಶದೆತ್ತರಕ್ಕೆ ಹಾರಿ ಚಿತ್ತಾಕರ್ಷಣೆ ಮೂಡಿಸಿತು.

ಸಾಲೂರು, ಬರಡನಪುರ, ಕುಂದೂರು, ನೀಲಕಂಠಸ್ವಾಮಿ, ರಾಗಿಬೊಮ್ಮನಹಳ್ಳಿ, ಮಾಗಡಿ ಕಮ್ಮತಗಿ, ದಂಡೀಕೆರೆ, ಕಳ್ಳೀಪುರ, ಕುಂತೂರು, ಪುರ, ಕಲ್ಮಟ, ಮಾಡ್ರಳ್ಳಿ, ನರೆಗ್ಯಾತನಹಳ್ಳಿ ಸೇರಿದಂತೆ ವಿವಿಧ ಮಠಾಧೀಶರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಅಧಿಕಾರಿಗಳಾದ ಎಸ್.ಪಿ.ಮಂಜುನಾಥ, ಎಸ್. ಶಿವಕುಮಾರಸ್ವಾಮಿ, ಎಸ್. ಪಿ. ಉದಯಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net