ಸುತ್ತೂರು ಮಠದಲ್ಲಿ ಶಿವದೀಪೋತ್ಸವ

Shiva Deepotsava at Suttur mutt
???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಮೈಸೂರು: ಶಿವದೀಪೋತ್ಸವದ ಅಂಗವಾಗಿ ಸುತ್ತೂರಿನ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃಗದ್ದುಗೆ, ಶ್ರೀ ಸೋಮೇಶ್ವರ, ಶ್ರೀ ಮಹದೇಶ್ವರ, ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ನಾರಾಯಣಸ್ವಾಮಿ ದೇವಾಲಯಗಳಲ್ಲಿ ಶುಕ್ರವಾರ ಸಂಜೆ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು.

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಶಿವದೀಪೋತ್ಸವ (ಕೃತ್ತಿಕಾ ಮಹೋತ್ಸವ)ದಲ್ಲಿ ಮಹಾಮಂಗಳಾರತಿ, ಬೆಳ್ಳಿರಥದ ಪ್ರಾಕಾರೋತ್ಸವ ನೆರವೇರಿತು. ಸುತ್ತೂರು ಶಾಲೆಯ ಮಕ್ಕಳು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಎನ್.ಎಸ್.ಎಸ್ ಘಟಕದ ರಾಜ್ಯ ಸಂಯೋಜನಾಧಿಕಾರಿ ಡಾ. ಗುಬ್ಬಿಗೂಡು ರಮೇಶ್ ಮಾತನಾಡಿ, ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ಯುವುದೇ ಶಿವದೀಪೋತ್ಸವ. ಇಂದು ಜಾಗತೀಕರಣದಿಂದ ಪ್ರಪಂಚದಾದ್ಯಂತ ದ್ವೇಷ, ಅಸೂಯೆ, ಆಕ್ರೋಶ ತುಂಬಿ ತುಳುಕುತ್ತಿದ್ದು, ದೇಶ ದೇಶಗಳ ನಡುವೆ ವೈರತ್ವ ಗುಣಗಳು ಬೆಳೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಕುಟುಂಬದ ಹಿರಿಯರಿಗೆ ಗೌರವ ಕೊಡಬೇಕು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಅತಿಯಾಸೆಯಿಂದ ಮನುಷ್ಯ ಹೊರಬಂದು ಹಂಚಿ ತಿನ್ನುವಂತಹ ಮನಸ್ಸನ್ನು ಬೆಳೆಸಿಕೊಳ್ಳಬೇಕು ಹಾಗೂ ಸಂಕುಚಿತ ಮನೋಭಾವ ಬಿಟ್ಟು ವಿಶಾಲ ಹೃದಯ ವೈಶಲ್ಯತೆ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಚನ ಸಾಹಿತ್ಯ ಇಡೀ ವಿಶ್ವಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯಾಗಿದೆ. ವಚನಗಳಲ್ಲಿ ಬೆಳಕಿದೆ, ಬದುಕಿಗೆ ದಾರಿ ಇದೆ, ನೊಂದವರಿಗೆ ಸಾಂತ್ವನವಿದೆ, ಸಮಸ್ಯೆಗಳಿಗೆ ಉತ್ತರವಿದೆ, ಮಾನವನ ಆತ್ಮೋದ್ಧಾರಕ್ಕೆ ಬೇಕಾದುದೆಲ್ಲವೂ ಇದೆ. ಸರ್ವಕಾಲಕ್ಕೂ ವಚನಗಳ ಸಾರಾಂಶ ಒಂದೇ ಆಗಿರುತ್ತದೆ. ಇಂತಹ ವಚನ ಸಾಹಿತ್ಯದಲ್ಲಿ ಬರುವ ತತ್ತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕನ್ನು ಸಾಗಿಸೋಣ. ಇಂದಿನ ಯುವಜನರು ಸಾಮಾಜಿಕ ಜಾಲತಾಣಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಸಂದೇಶಗಳನ್ನು ರವಾನೆ ಮಾಡುವಾಗ ಸಂಸ್ಕೃತಿ, ಮೌಲ್ಯಗಳು, ಆಧ್ಯಾತ್ಮಿಕ, ಧಾರ್ಮಿಕ ವಿಚಾರಗಳಿಗೆ ಒತ್ತು ನೀಡಿ, ಲೋಕ ಕಲ್ಯಾಣಕ್ಕಾಗಿ ಉಪಯೋಗವಾಗುವಂತಹ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದು ನುಡಿದರು.

12ನೇ ಶತಮಾನದಲ್ಲಿ ಶಿವಶರಣರು ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳು, ವಿಡಂಬಣೆ, ಓರೆಕೋರೆಗಳನ್ನು ತಿದ್ದುವಂತಹ ಸತ್ಯಾನ್ವೇಷಣೆಯ ವಾಸ್ತವದ ಬದುಕು ಮತ್ತು ಅನುಭವಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವಚನಗಳ ಮೂಲಕ ತಿಳಿಸಿದರು.

ಶಿವದೀಪೋತ್ಸವದ ಅಂಗವಾಗಿ ದೇವಾಲಯಗಳಿಗೆ ಮಾಡಿದ್ದ ವಿಶೇಷ ದೀಪಾಲಂಕಾರ ನೆರೆದಿದ್ದ ಸಹಸ್ರಾರು ಭಕ್ತಾದಿಗಳ ಕಣ್ಮನ ತಣಿಸಿತು. ಬಾಣ ಬಿರುಸುಗಳು ಆಕಾಶದೆತ್ತರಕ್ಕೆ ಹಾರಿ ಚಿತ್ತಾಕರ್ಷಣೆ ಮೂಡಿಸಿ ನೆರೆದಿದ್ದ ಸಹಸ್ರಾರು ಭಕ್ತಾದಿಗಳಲ್ಲಿ ಹರ್ಷೋದ್ಘಾರ ಮೂಡಿಸಿತು.

ಕಾರ್ಯಕ್ರಮದಲ್ಲಿ ಸಾಲೂರು, ಬರಡನಪುರ, ಕುಂದೂರು, ನೀಲಕಂಠಸ್ವಾಮಿ, ರಾಗಿಬೊಮ್ಮನಹಳ್ಳಿ, ಮಾಗಡಿ ಕಮ್ಮತಗಿ, ದಂಡೀಕೆರೆ, ಕಳ್ಳೀಪುರ, ಕುಂತೂರು, ಪುರ, ಕಲ್ಮಟ, ಮಾಡ್ರಳ್ಳಿ, ನರೇಗ್ಯಾತನಹಳ್ಳಿ ಮೊದಲಾದ ಮಠಗಳ ಪೂಜ್ಯರುಗಳು, ಹರಗುರು ಚರಮೂರ್ತಿಗಳು, ಜೆಎಸ್‌ಎಸ್ ಮಹಾವಿದ್ಯಾಪೀಠದ ಅಧಿಕಾರಿಗಳಾದ ಎಸ್. ಪಿ. ಮಂಜುನಾಥ, ಎಸ್. ಶಿವಕುಮಾರಸ್ವಾಮಿ, ಎಸ್. ಪಿ. ಉದಯಶಂಕರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net