

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠದಲ್ಲಿ ಭಾನುವಾರ ರಾತ್ರಿ ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ಶಿವ ಮತ್ತು ವಿಷ್ಣು ಜ್ಯೋತಿ ಉತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದಿಂದ ಜರುಗಿತು.
ದೀಪೋತ್ಸವದ ಹಿನ್ನೆಲೆಯಲ್ಲಿ ವಾಡಿಕೆಯಂತೆ ಸಮೀಪದ ಹಲವಾರು ಗ್ರಾಮಸ್ಥರು ಶ್ರೀಮಠಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಪೀಠಾಧ್ಯಕ್ಷರಾದ ಶ್ರೀ ಜ್ಞಾನನಂದ ಚನ್ನರಾಜೇ ಅರಸು ಅವರು ಉರಿ ಗದ್ದುಗೆ ಮೇಲೆ ಕುಳಿತು ಧರೆಯ ಮೇಲಿನ ಜೀವ ಸಂಕುಲದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಪೀಠಾಕಾರಿ ವಂಶಸ್ಥ ವರುಣ್ ಲಿಂಗರಾಜೇ ಅರಸು ಅವರು ಮಂಟೇಸ್ವಾಮಿ ಐಕ್ಯವಾಗಿರುವ ಮೂಲ ಗದ್ದುಗೆಗೆ ಪೂಜೆ ಸಲ್ಲಿಸಿದರು. ಪೀಠಾಕಾರಿ ಸಹೋದರ ಸಂಜಯ್ ರಾಜೇ ಅರಸು ಅವರು ಗದ್ದುಗೆ ಗೋಪುರದ ಮೇಲೇರಿ ಪಂಜು ಹೊತ್ತಿಸಿ ಶಿವಜ್ಯೋತಿ ಬೆಳಗಿಸಿದರು. ಈ ಸಂದರ್ಭದಲ್ಲಿ ನೆರೆದ ಭಕ್ತರು ಧರೆಗೆ ದೊಡ್ಡವರ ಪಾದಕ್ಕೆ ಉಘೇ ಎಂದು ಘೋಷಣೆ ಕೂಗಿ ಭಕ್ತಿ ಸಮರ್ಪಿಸಿದರು. ನಂತರ ಮಠದ ಆವರಣದಲ್ಲಿ ಉತ್ಸವ ಮೂರ್ತಿಗಳ ಜತೆಗೆ ಕುರುಬನಕಟ್ಟೆ ಕ್ಷೇತ್ರ ಹಾಗೂ ಕಗ್ಗಲೀಪುರ ಗ್ರಾಮದದಿಂದ ತರಲಾಗಿದ್ದ ಕಂಡಾಯಗಳ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಬಿ.ಜಿ.ಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡು ಮಂಟೇಸ್ವಾಮಿ ಗದ್ದುಗೆ ಮತ್ತು ಶಿವ ಜ್ಯೋತಿ ಉತ್ಸವವನ್ನು ಕಣ್ತುಂಬಿಕೊಂಡರು.
ಕಾಲಜ್ಞಾನದ ಸೂಚನೆ ಶಿವಜ್ಯೋತಿ: ಮಂಟೇಸ್ವಾಮಿ ಮಠದಲ್ಲಿ ನಡೆಯುವ ಶಿವ ಮತ್ತು ವಿಷ್ಟು ಜ್ಯೋತಿ ಉತ್ಸವಕ್ಕೆ ವಿಶೇಷವಾದ ಪ್ರತೀತಿ ಇದ್ದು, ಭೂಮಂಡದಲ್ಲಿ ಗತಿಸುವ ಭವಿಷ್ಯದ ಸೂಚನೆಯನ್ನು ಶಿವ ಜ್ಯೋತಿಯ ಜ್ಞಾಲೆ ತಿಳಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಶ್ವೇತವರ್ಣದ ಎರಡು ಮೀಟರ್ ಅಳತೆಯ ಬಟ್ಟೆಯನ್ನು ಅರುಳು ಎಣ್ಣೆಯಲ್ಲಿ ನೆನೆಸಲಾಗುತ್ತದೆ. ಅದನ್ನು 20 ಅಡಿ ಉದ್ದದ ಧೂಪದ ಮರದ ಕೋಲಿಗೆ ಕಟ್ಟಲಾಗುತ್ತದೆ. ಪೀಠಾಕಾರಿ ವಂಶಸ್ಥರು ಈ ಪಂಜಿನ ಕೋಲನ್ನು ಹಿಡಿದು ಧರೆಗೆ ದೊಡ್ಡವರು ಮಂಟೇಸ್ವಾಮಿ ಗದ್ದುಗೆ ಮೇಲೇರಿದಾಗ ಕೆಳಗಿನಿಂದ ಮಡಿವಾಳ ಸಮಾಜದವರು ಪಂಜಿಗೆ ಅಗ್ನಿಸ್ಪರ್ಶ ಮಾಡುತ್ತಾರೆ. ಈ ವೇಳೆ ಪಂಜಿಗೆ ಹೊತ್ತಿದ ಬೆಂಕಿ ಸಮ ಪ್ರಮಾಣದಲ್ಲಿ ಉರಿದರೆ ಮಳೆ, ಬೆಳೆ ಸುಭಿಕ್ಷವಾಗಿ ಆಗಲಿದೆ ಎಂದು ಓರೆಯಾಗಿ ಉರಿದರೆ ಕೆಲವೆಡೆ ಪ್ರಕೃತಿಯಲ್ಲಿ ಏರುಪೇರಾಗುತ್ತದೆ ಎಂಬುದು ಅನಾದಿಕಾಲದಿಂದಲೂ ಭಕ್ತರ ನಂಬಿಕೆಯಾಗಿದ್ದು, ಕಳೆದ ರಾತ್ರಿ ನಡೆದ ಶಿವಜ್ಯೋತಿಯೂ ಸಮಪ್ರಮಾಣದಲ್ಲಿ ಕಂಡುಬಂದಿದ್ದು, ಮುಂಬರುವ ವರ್ಷದಲ್ಲಿ ಉತ್ತಮ ಮಳೆಯಾಗುವುದರ ಜತೆಗೆ ರೈತವರ್ಗ ಹಾಗೂ ಜನಸಾಮಾನ್ಯರು ಬದುಕು ಉತ್ತಮವಾಗಿರಲಿದೆ ಎಂಬ ಶುಭಸೂಚನೆ ದೊರೆತಿದೆ ಎಂದು ಇಲ್ಲಿನ ಹಿರಿಯರು ತಿಳಿಸಿದ್ದಾರೆ.