

ಬೆಳಗಾವಿ: ಕೊಲ್ಲಾಪುರದ ಧಾರ್ಮಿಕ ಸ್ಥಳಕ್ಕೆ ತೆರಳಿದ್ದ ಬೀದರ ಜಿಲ್ಲೆಯ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌವ್ಹಾಣಗೆ ಬುಧವಾರ ಶಿವಸೇನೆ ಪುಂಡರು ಗೆರಾವ್ ಹಾಕುವ ಮೂಲಕ ಮೊಂಡುತನ ಮೆರೆದಿದ್ದಾರೆ. ಶಿವಸೇನೆ ಮುಖಂಡ ವಿಜಯ್ ದೇವಣೆ ನೇತತ್ವದಲ್ಲಿ ಶಾಸಕ ಚೌವ್ಹಾಣ ಕಾರು ಅಡ್ಡಗಟ್ಟಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿದ್ದ ಮಹಾಮೇಳಕ್ಕೆ ನಮಗೆ ಅವಕಾಶ ಕೊಟ್ಟಿಲ್ಲ, ಪ್ರತಿಬಾರಿಯು ನಮ್ಮ ನಾಯಕರಿಗೆ ನಿರ್ಬಂಧ ಹೇರಲಾಗುತ್ತಿದೆ. ಆದ್ದರಿಂದ್ದ ನಾವೇಕೆ ನಿಮಗೆ ಮಹಾರಾಷ್ಟ್ರದಲ್ಲಿ ಸಂಚರಿಸಲು ಅವಕಾಶ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಇದೇ ರೀತಿ ಮುಂದುವರೆದರೆ ಕರ್ನಾಟಕದ ಯಾವ ಒಬ್ಬ ಶಾಸಕರನ್ನು ಮಹಾರಾಷ್ಟ್ರದಲ್ಲಿ ಸಂಚರಿಸಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ಶಿವಸೇನೆ ಪುಂಡರು ಉದ್ಧಟತನ ಪ್ರದರ್ಶಿಸಿದ್ದಾರೆ.