

ಹುಬ್ಬಳ್ಳಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್ಪಿವೈಎಸ್ಎಸ್) ಹಾಗೂ ಯೋಗ ಸ್ಪರ್ಶ ಪ್ರತಿಷ್ಠಾನ ವತಿಯಿಂದ ಇಲ್ಲಿಯ ಶ್ರೀ ಸಿದ್ಧಾರೂಢಸ್ವಾಮಿ ಮಠದ ಆವರಣದಲ್ಲಿ ಶಿವರಾತ್ರಿ ಅಂಗವಾಗಿ ಸಾಮೂಹಿಕ ಶಿವ ನಮಸ್ಕಾರ ಸಲ್ಲಿಸಲಾಯಿತು.
ಬುಧವಾರ ಬೆಳಗ್ಗೆ ಶ್ರೀ ಮಠದ ಆವರಣದಲ್ಲಿ ಸೇರಿದ ಯೋಗ ಬಂಧುಗಳು, ಯೋಗ ಶಿಕ್ಷಕರು, ಯೋಗಾಸಕ್ತ ಸಾರ್ವಜನಿಕರು ಶಿಸ್ತುಬದ್ಧವಾಗಿ ಶಿವ ನಮಸ್ಕಾರ ಮಾಡಿದರು.
ಎಸ್ಪಿವೈಎಸ್ಎಸ್ ಪ್ರಾಂತ ಸಂಚಾಲಕ ಪ್ರಸನ್ನ ದೀಕ್ಷಿತ್ ಮಾತನಾಡಿ, ಶಿವ ನಮಸ್ಕಾರದ ಮಹತ್ವ ತಿಳಿಸಿದರು. ಸಾಕ್ಷಾತ್ ಶಿವನ ಅವತಾರ ಶ್ರೀ ಸಿದ್ಧಾರೂಡರ ಭಜನೆ, ಮಂಗಳಾರತಿ ನಂತರ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.
ಸಮಿತಿ ಜಿಲ್ಲಾ ಸಂಚಾಲಕ ಗೋಪಾಲ ಜೋಶಿ, ಶಿವ ನಮಸ್ಕಾರ ಕಾರ್ಯಕ್ರಮದ ಸಂಚಾಲಕ ಸಚಿನ್ ದುಂದೂರ, ಸಂಚಾಲಕಿ ಭಾರತಿ ನರಗುಂದ, ಯೋಗ ಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಇತರರು ಪಾಲ್ಗೊಂಡಿದ್ದರು.