

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸಿರಿಗಂಧ ಜಾನಪದ ಕಲಾ ಬಳಗ ವತಿಯಿಂದ ಜು. 20ರಂದು ಸಂಜೆ 4 ಗಂಟೆಗೆ ನೌಕರರ ಭವನದಲ್ಲಿ ಸಂತ ಶಿಶುನಾಳ ಶರೀಫ್ ಶಿವಯೋಗಿಗಳ ಜಯಂತ್ಯುತ್ಸವ, ಜಾನಪದ ಮತ್ತು ತತ್ವಪದಗಳ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಪ್ರಕಾಶ ಕಂಬಳಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನಪದ ಅಕಾಡೆಮಿ ಸದಸ್ಯ ಶಂಕರಪ್ಪ ಸಂಕಣ್ಣವರ ಉದ್ಘಾಟಕರಾಗಿ ಆಗಮಿಸುವರು. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಎಸ್.ಎಫ್ . ಸಿದ್ದನಗೌಡರ, ಡಾ. ಲಿಂಗರಾಜ ಅಂಗಡಿ, ಡಾ. ಎಚ್.ವಿ. ಬೆಳಗಲಿ, ಪರಶುರಾಮ ದಿವಾನದ, ಬಾಬಾಜಾನ ಮುಲ್ಲಾ, ರಮೇಶ ಲಮಾಣಿ, ಅಶೋಕ ಜೋಡಳ್ಳಿ, ಸಿಕಂದರ ದಂಡಿನ, ನಮ್ರತಾ ಹೂಗಾರ ಆಗಮಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಾನಪದ ಕಲಾವಿದ ಶರೀಫ್ ದೊಡಮನಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಚಂದ್ರಶೇಖರ ಕೆಂಗಾರ ಅವರಿಗೆ ಜಾನಪದ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾಜ್ಯ ಸರ್ಕಾರಿ ನೌಕರರು ಸೇರಿ ಜಾನದಪ ಕಲೆ ಉಳಿಸುವ ನಿಟ್ಟಿನಲ್ಲಿ ಈ ಬಳಗ ಆರಂಭಿಸಲಾಗಿದೆ. ಸಾಕಷ್ಟು ಜನರು ನಮ್ಮ ಸಂಸ್ಥೆಯ ಬೆಳವಣಿಗೆಗೆ ಕೈ ಜೋಡಿಸಿದ್ದಾರೆ. ಇದೇ ಕಾರಣಕ್ಕೆ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದರು.
ಎನ್.ವಿ. ದ್ಯಾವೂರ, ಜಯಲಕ್ಷ್ಮೀ ಎಚ್., ಬಸವರಾಜ ಚಿಕ್ಕೂರ, ಇತರರು ಇದ್ದರು.