ಅವೈಜ್ಞಾನಿಕ ಶಿಶು ಪಾಲನಾ ಕೇಂದ್ರಗಳ ಚಾಲನೆಗೆ ಸಿದ್ಧತೆ

IMG-20230922-WA0017
Published on

ವಿಜಯವಾಣಿ ಸುದ್ದಿಜಾಲ ಗದಗ
ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನದಲ್ಲಿ ಹಲವು ದೋಷಗಳಿದ್ದರೂ, ಯೋಜನೆ ಬಲವರ್ಧನೆಗೆ ಅಂಗನವಾಡಿಗಳನ್ನು ಹೊರತು ಪಡಿಸಿ ಹೊಸದಾಗಿ ಶಿಶು ಪಾಲನಾ ಕೇಂದ್ರಗಳ ಆರಂಭಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಯೋಜನೆ ಗೊಂದಲ ಗೂಡಾಗಿದೆ. ಒಂದು ಗ್ರಾಮ ಪಂಚಾಯಿತಿ ಅಡಿಯಲ್ಲಿ ಮೂರ್ನಾಲ್ಕು ಹಳ್ಳಿಗಳಿದ್ದು, ಮಹಿಳಾ ಕೂಲಿಕಾರರು ಒಂದು ಗ್ರಾಮದಿಂದ ಮತ್ತೊಂದು ಗ್ರಾಮದ ಶಿಶು ಪಾಲನಾ ಕೇಂದ್ರಕ್ಕೆ ಆರೈಕೆಗಾಗಿ ಮಕ್ಕಳನ್ನು ಬಿಡುವುದು ಅಸಾಧ್ಯ. 3.5 ವರ್ಷದೊಳಗಿನ ಮಕ್ಕಳನ್ನು ಆರೈಕೆ ಕೇಂದ್ರದಲ್ಲಿ ಬಿಟ್ಟು ಮಹಿಳೆಯರೂ ಕೂಲಿಗಾಗಿ ತೆರಳುವುದು ಕೂಡ ಸಾಧ್ಯವಿಲ್ಲ. ಇನ್ನೂ ರಾಜ್ಯದ ಹಲವಡೆ ಯಂತ್ರೋಪಕರಣ ಬಳಸಿಯೇ ನರೇಗಾ ಕಾಮಗಾರಿಗಳು ಜರುಗುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿರುವುದು ಹೊಸತೇನಲ್ಲ. ಹೀಗಾಗಿ ಶಿಶು ಪಾಲನಾ ಕೇಂದ್ರಗಳ ಅಗತ್ಯತೆ ಕುರಿತು ಪ್ರಶ್ನೆ ಉದ್ಭವಿಸಿದೆ. ಯೋಜನೆಯಲ್ಲಿ ನ್ಯೂನ್ಯತೆ ಕಂಡು ಬರುತ್ತಿದ್ದು, ಅಂಗನವಾಡಿಗೆ ಯೋಜನೆಯ ಮೇಲುಸ್ತುವಾರಿ ನೀಡಬೇನೆನ್ನುವ ಕೂಗು ಕೇಳೀ ಬರುತ್ತಿದೆ.
ನರೇಗಾ ಯೋಜನೆಯ ಬಲವರ್ಧನೆ ಗೊಳಿಸುವ ಉದ್ದೇಶದೊಂದಿಗೆ ಕಾಂಗ್ರೆಸ್​ ಸರ್ಕಾರ ಮೊದಲ ಬಜೆಟ್​ ಅಧಿವೇಶನದಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ತೆರೆಯುವ ಕುರಿತು ಘೋಷಿಸಿತ್ತು. ಮಹಿಳಾ ಕೂಲಿಕಾರರ 3.5 ವರ್ಷದೊಳಗಿನ ಮಕ್ಕಳ ಪೋಷಣೆಗೆ ಮತ್ತು ಉದ್ಯೋಗ ಖಾತ್ರಿ ದಿನಗಳನ್ನು ಅಧಿಕಗೊಳಿಸಲು ಈ ಯೋಜನೆ ಜಾರಿಗೆ ಉದ್ದೇಶಿಸಲಾಗಿತ್ತು. ಆರಂಭದಲ್ಲಿ 1000 ಗ್ರಾಪಂಗಳನ್ನು ಆಯ್ಕೆ ಮಾಡಿದ್ದ ಪಂಚಾಯತ್​ ರಾಜ ಇಲಾಖೆ ಶಿಶು ಪಾಲಕರಿಗೆ ತರಬೇತಿಯನ್ನೂ ನೀಡಿದೆ. ಈ ಮೊದಲು ಆ.15 ರಂದು ಚಾಲನೆ ನೀಡಲು ಹಲವು ಗ್ರಾಪಂಗಳಲ್ಲಿ ಯೋಜನೆ ಚಾಲನೆಗೆ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, ಗ್ರಾಪಂ, ತಾಪಂ ಸದಸ್ಯರ ಸಮಿತಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿ ರಚಿಸದೇ, ಸಂಪನ್ಮೂಲ ಕ್ರೂಢಿಕರಣ, ಅನುದಾನ ವಿನಿಯೋಗ ಸೇರಿದಂತೆ ಹಲವು ನಿಯಮಗಳನ್ನು ರಚಿಸದೇ ತರಾತುರಿಯಲ್ಲಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು, ಈ ನಡುವೆ ಆಡಳಿತಾತ್ಮಕ ತೊಂದರೆ ಉಲ್ಭಣಿಸಿದ್ದರಿಂದ ಆ.14 ರಂದು ಸಂಜೆ ಪಂಚಾಯತ್​ ರಾಜ್​ ಆಯುಕ್ತಾಲಯವು ಏಕಾಏಕಿ ಎಲ್ಲ ಗ್ರಾಪಂಗಳಿಗೆ ಮೌಖಿಕ ಆದೇಶ ನೀಡಿ ಕ್ರಾರ್ಯಕ್ರಮಕ್ಕೆ ತಡೆ ನೀಡಿತ್ತು. ಸದ್ಯ ರಾಜ್ಯದ 4000 ಗ್ರಾಪಂಗಳಲ್ಲಿ ಆರಂಭಿಸಲು ಉದ್ದೇಶಿತ ಶಿಸು ಪಾಲನಾ ಕೇಂದ್ರಗಳ ನಡವಾಳಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಗ್ರಾಪಂ, ತಾಪಂ ಜವಾಬ್ದಾರಿ ಮತ್ತು ಅನುದಾನ ವಿನಿಯೋಗ ಸೇರಿದಂತೆ ಹಲವು ಮಹತ್ವದ ನಡಾವಳಿ ಸೂಚಿಸಿರುವ ರಾಜ್ಯ ಸರ್ಕಾರ ಸರಾಸರಿ 1 ಲಕ್ಷ ರೂ. ವೆಚ್ಚದಲ್ಲಿ ತಲಾ ಶಿಶುಪಾಲನಾ ಕೇಂದ್ರಗಳನ್ನು ತೆರೆಯುತ್ತಿದೆ.

ಅನುದಾನ ವಿನಿಯೋಗ:
ಗ್ರಾಪಂ ಅನಾವರ್ತಕ ವೆಚ್ಚದಲ್ಲಿ ಕೇಂದ್ರಗಳ ಆರಂಭಕ್ಕೆ ಒಂದು ಬಾರಿ 35 ಸಾವಿರ ರೂ, ಮೂಲ ಸೌಕರ್ಯ ಅಭಿವೃದ್ಧಿಗೆ 30 ಸಾವಿರ ರೂ ಹಾಗೂ ವರ್ಷಕ್ಕೆ ಒಂದು ಬಾರಿ ಮಕ್ಕಳಿಗೆ ಆಟಿಕೆ ಸಾಮಗ್ರಿ ಖರೀದಿಗೆ 5000 ರೂ. ವೆಚ್ಚ ವಿನಿಯೋಗಿಸಬಹುದು. ಆವರ್ತಕ ವೆಚ್ಚದಲ್ಲಿ ವಷಕ್ಕೆ 57680 ರೂ.ಗಳನ್ನು ಪೌಷ್ಠಿಕ ಆಹಾರ ಪೂರೈಕೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸಮುದಾಯ ಭಾಗವಹಿಸುವಿಕೆ, ಸಭೆಗಳಿಗೆ ಭರಿಸಲು ಸೂಚಿಸಿದೆ. ಶಿಶು ಪಾಲಕರಿಗೆ ಪುನಶ್ಚೇತನ ತರಬೇತಿ ನೀಡಲು ತಾಪಂ ಅನಿರ್ಭಂದಿತ ನಿಧಿಯಿಂದ ವಾಷಿರ್ಕ 8000 ರೂ. ವಿನಿಯೋಗಿಸಲು ಹೊಸ ಸುತ್ತೊಲೆಯಲ್ಲಿ ತಿಳಿಸಲಾಗಿದೆ.

ನ್ಯೂನ್ಯತೆಗಳೇನು?

  • 3.5 ವರ್ಷದೊಳಗಿನ ಮಗುವನ್ನು ಶಿಶು ಪಾಲನ ಕೇಂದ್ರಕ್ಕೆ ತಾಯಿ ಒಪ್ಪಿಸುವುದು ಅನುಮಾನ.
  • ಅಂಗನವಾಡಿ ಈ ದಿಸೆಯಿಂದ ಈಗಾಗಲೇ ಕಾರ್ಯ ಮಾಡುತ್ತಿದ್ದು, ಅಂಗನವಾಡಿ ಹೊರತುಪಡಿಸಿ ಶಿಶು ಪಾಲನಾ ಕೇಂದ್ರಗಳ ಆರಂಭದ ಉದ್ದೇಶ ಹಿನ್ನೆಲೆ ಏನು ಎಂಬ ಪ್ರಶ್ನೆ?
  • ಗ್ರಾಪಂ ಅಡಿಯಲ್ಲಿ ನಿರ್ವಹಿಸುವ ಈ ಕೇಂದ್ರಗಳಿಗೆ ಬೇರೆ ಗ್ರಾಮದ ಕೂಲಿಕಾರ ಮಕ್ಕಳನ್ನು ಕರೆತರುವುದು ಹಾಸ್ಯಾಸ್ಪದ.

ಕೋಟ್​:
ಇಲಾಖೆಯ ಕಾಯ್ದೆಯಲ್ಲಿ ಶಿಶು ಪಾಲನಾ ಕೇಂದ್ರಗಳ ಆರಂಭಕ್ಕೆ ಅವಕಾಶವಿದೆ. ಈ ಮೊದಲು ಅಂಗನವಾಡಿಗಳಿಗೆ ಯೋಜನೆ ಒಪ್ಪಿಸಲು ಉದ್ದೇಶಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.
- ಪ್ರಿಯಾಂಕ ಮೇರಿ, ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net