ಚಾರಣಿಗರ ಸ್ವರ್ಗ ಶಿರ್ವೆ ಸಿದ್ದರಾಮೇಶ್ವರ ಜಾತ್ರೆ ಸಂಪನ್ನ

Shirve-Jatra
Published on

ಕಾರವಾರ: ತಾಲೂಕಿನ ಶಿರ್ವೆ ಗುಡ್ಡದ ಸಿದ್ದರಾಮೇಶ್ವರ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವು ಮಂಗಳವಾರ ಶ್ರದ್ಧೆ , ಭಕ್ತಿಯಿಂದ ನಡೆಯಿತು.
ಕಾಯಕ ಶರಣ ಸಿದ್ದರಾಮೇಶ್ವರರು ಉಳವಿ, ಶಿರ್ವೆ, ಸಿದ್ದರ, ಮಚ್ಚಳ್ಳಿ ಮಾರ್ಗವಾಗಿ ಸಂಚಾರ ಬೆಳೆಸಿದ್ದರು ಎಂಬ ಪ್ರತೀತಿ ಇದೆ. ಎಲ್ಲ ಕಡೆ ಸಿದ್ದರಾಮೇಶ್ವರ ದೇವಸ್ಥಾನಗಳಿದ್ದು, ಜಾತ್ರೆ ನಡೆಯುತ್ತದೆ. ಶಿರ್ವೆಯ ಗುಡ್ಡದ ಮೇಲಿರುವ ದೇವಾಲಯದಲ್ಲಿ ಗ್ರಾಮಸ್ಥರು ಹಾಗೂ ಸುತ್ತಲಿನ ಊರಿನ ಜನ ಸೇರಿ ಜಾತ್ರೆ ನಡೆಸುತ್ತಾರೆ.
ಭಕ್ತರು, ಕುಳಾವಿಗಳು ಸಾಯಂಕಾಲ ದೇವರ ಪಲ್ಲಕ್ಕಿಯನ್ನು ಗುಡ್ಡಕ್ಕೆ ಕೊಂಡೊಯ್ದರು. ರಾತ್ರಿ ದೇವಸ್ಥಾನದ ಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ ನಡೆಯಿತು. ನಂತರ ಮಹಾದೇವ ನವ್ಯ ನಾಟ್ಯ ಮಂಡಳಿಯಿMದ `ಸಮಾಜ ಮೆಚ್ಚಿದ ಸರದಾರ' ಎಂಬ ಕನ್ನಡ ನಾಟಕ ಪ್ರದರ್ಶನ ನಡೆಯಿತು.
ಮರುದಿನ ಬೆಳಗ್ಗೆ ಬೆಳಕು ಹರಿಯುವ ಪೂರ್ವದಲ್ಲಿ ಗುಡ್ಡದ ತುತ್ತ ತುದಿಯಲ್ಲಿರುವ ನಂದಿ ಮೂರ್ತಿಯ ಎದುರು ದೀಪ ಬೆಳಗಿಸಿ ಊದಿನಕಡ್ಡಿ ಹಚ್ಚಿ ಪೂಜೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಜಾತ್ರೆಗೆ ಸಾಕ್ಷಿಯಾದರು. ಜಾತ್ರೆಯು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೇ ಚಾರಣಿಗರ ಸ್ವರ್ಗವಾಗಿ ರೂಪುಗೊಂಡಿತು.
ವಿದ್ಯುತ್ ಸಂಪರ್ಕ:
ಸಿದ್ದರಾಮೇಶ್ವರ ಗುಡ್ಡಕ್ಕೆ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಎನ್‌ಪಿಸಿಐಎಲ್ ಸಿಎಸ್‌ಆರ್ ನಿಽ ಇತರ ಹಲವು ದಾನಿಗಳ ನೆರವಿನಿಂದ ವಿದ್ಯುತ್ ಸಂಪರ್ಕ ಒದಗಿಸಲಾಗಿದ್ದು, ಮೊದಲ ಬಾರಿಗೆ ವಿದ್ಯುದಾಲಂಕಾರದಲ್ಲಿ ಜಾತ್ರೆ ನಡೆಯಿತು. ವಿದ್ಯುದಾಲಂಕಾರಕ್ಕೆ ಸಹಕರಿಸಿದವರನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net