

ವಿಜಯವಾಣಿ ಸುದ್ದಿಜಾಲ ಶಿರ್ವ
29ನೇ ವರ್ಷದ ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಸಂಪ್ರದಾಯಬದ್ಧ ಜೋಡುಕರೆ ಕಂಬಳ ಬುಧವಾರ ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ಸಂಪನ್ನಗೊಂಡಿತು.
ಹಿರಿಯರಾದ ಉದ್ಯಮಿ ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ಕಂಬಳ ಮತ್ತು ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ನವೀಕರಣಗೊಂಡ ಸೂರ್ಯ-ಚಂದ್ರ ಜೋಡುಕರೆಯನ್ನು ಉದ್ಘಾಟಿಸಿದರು. ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ನಡೆದ ಬಳಿಕ ಬಂಟ ಕೋಲ ನಡೆದು ಮೆರವಣಿಗೆಯಲ್ಲಿ ಕೊಂಬು, ವಾದ್ಯ-ಘೋಷಗಳೊಂದಿಗೆ ಮನೆಯ ಕೋಣಗಳನ್ನು ಗದ್ದೆಗಿಳಿಸಲಾಯಿತು. ಕಾಪು ತಹಸೀಲ್ದಾರ್ ಡಾ. ಪ್ರತಿಭಾ ಆರ್., ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿದರು.
ಹಗ್ಗ ಕಿರಿಯ ವಿಭಾಗದಲ್ಲಿ 30ಜತೆ ಕೋಣಗಳು ಮತ್ತು ಸಬ್‌ಜೂನಿಯರ್ ವಿಭಾಗದಲ್ಲಿ 40ಜತೆ ಒಟ್ಟು 70 ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು. ಕೋಣಗಳ ಸ್ಪರ್ಧೆ ಮುಗಿದ ಬಳಿಕ ಮನೆತನದ ಕೋಣಗಳನ್ನು ಗದ್ದೆಗಿಳಿಸಿ ಓಡಿಸುವುದರೊಂದಿಗೆ ಸಾಂಪ್ರದಾಯಿಕ ಕಂಬಳ ಸಂಪನ್ನಗೊಂಡಿತು.
ಕರಾವಳಿ ಅಭಿವೃದ್ಧಿ ಪಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕೆ.ಪಿ. ಜಗದೀಶ ಅಧಿಕಾರಿ, ಕಾಪು ತಾಲೂಕು ಯುವಜನ ಕ್ರೀಡಾಧಿಕಾರಿ ಸೂಡ ರಿತೇಶ್ ಕುಮಾರ್ ಶೆಟ್ಟಿ, ಶಿರ್ವ ಗ್ರಾಪಂ ಅಭಿವೃದ್ದಿ ಅಧಿಕಾರಿ ಅನಂತಪದ್ಮನಾಭ ನಾಯಕ್, ಕಾರ್ಯದರ್ಶಿ ಚಂದ್ರಮಣಿ, ಗ್ರಾಮ ಆಡಳಿತಾಧಿಕಾರಿ ಶ್ವೇತಾ ಸುವರ್ಣ, ರತನ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಕೆ.ಆರ್.ಪಾಟ್ಕರ್, ಪಿಲಾರು ಸುಧಾಕರ ಭಂಡ್ರಿಯಾಲ್, ಕುತ್ಯಾರು ಕೇಂಜ ಸಾಯಿನಾಥ ಶೆಟ್ಟಿ, ಶಿರ್ವ ನಡಿಬೆಟ್ಟು ಮನೆತನದ ಯಜಮಾನ ದಾಮೋದರ ಚೌಟ, ವ್ಯವಸ್ಥಾಪಕ ಶಿರ್ವ ನಡಿಬೆಟ್ಟು ಶಶಿಧರ ಹೆಗ್ಡೆ, ಸಚ್ಚಿದಾನಂದ ಹೆಗ್ಡೆ, ಪ್ರಶಾಂತ ಶೆಟ್ಟಿ ಸೂಡ, ಎಸ್.ಕೆ.ಸಾಲಿಯಾನ್, ವಿಲ್ಸನ್ ಕುಂದರ್, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಅಟ್ಟಿಂಜೆ ಸುಧೀರ್ ಶೆಟ್ಟಿ, ಅಟ್ಟಿಂಜೆ ಪ್ರದೀಪ್ ಶೆಟ್ಟಿ, ತಮ್ಮಣ್ಣ ಪೂಜಾರಿ, ಸುರೇಂದ್ರ ಪೂಜಾರಿ ಕೊಪ್ಪಲ, ವೀರೇಂದ್ರ ಪೂಜಾರಿ, ಶಿರ್ವ ನಡಿಬೆಟ್ಟು ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಮತ್ತು ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸೂರ್ಯಚಂದ್ರ ಜೋಡುಕರೆಯನ್ನು ನವೀಕರಣ ಮಾಡಲು ಸಹಕರಿಸಿದ ಉದ್ಯಮಿ ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ಹೇಮಲತಾ ಶೆಟ್ಟಿ ದಂಪತಿ ಹಾಗೂ ಕಂಬಳ ಕ್ಷೇತ್ರದಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲಿಯಾನ್ ಮತ್ತು ಸರಪಾಡಿ ಜಾನ್ ಸಿರಿಲ್ ಡಿಸೋಜಾ(ಅಪ್ಪಣ್ಣ) ಅವರನ್ನು ಸಮ್ಮಾನಿಸಲಾಯಿತು.
ತುಳುನಾಡಿನ ಆಚರಣೆಗಳು ಸಂಸ್ಕೃತಿಗಳು ಅತ್ಯಂತ ಶ್ರೀಮಂತವಾಗಿವೆ. ಮನೆತನಗಳು ಆಚರಿಸಿಕೊಂಡು ಬರುವ ಕಂಬಳದಂತಹ ದೈವಿಕ ಸ್ಪರ್ಶವಿರುವ ತುಳುನಾಡಿನ ಸಂಸ್ಕೃತಿ ಪರಂಪರೆಗಳು ಕೊನೆಯಾಗದೆ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು. -ಡಾ.ಪ್ರತಿಭಾ ಆರ್. ಕಾಪು ತಹಸೀಲ್ದಾರ್. ಜಾತಿ, ಮತ ಧರ್ಮದ ಭೇದವಿಲ್ಲದೆ ಸರ್ವ ಜನರೂ ಭಾಗವಹಿಸುವ ತುಳುನಾಡಿನ ಪರಂಪರೆಯನ್ನು ಕಾಣುವ ಕಂಬಳವನ್ನು ಉಳಿಸಿ ಬೆಳೆಸುವ ಕೆಲಸ ನಡೆಯಬೇಕಿದೆ. -ಸುರೇಶ್ ಶೆಟ್ಟಿ ಗುರ್ಮೆ, ಕಾಪು ಶಾಸಕ. https://www.vijayavani.net/addition-of-contaminated-water-to-the-lake https://www.vijayavani.net/non-partisan-effort-to-solve-the-problem