

ಉಡುಪಿ: ಶಿರೂರು ಮಠದ ಪೀಠಾಧಿಪತಿಯಾಗಿ ಸನ್ಯಾಸ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಶುಕ್ರವಾರ ಕೃಷ್ಣಮಠದಲ್ಲಿ ಕೃಷ್ಣ ದೇವರ ವಿಗ್ರಹ ಸ್ಪರ್ಶಿಸಿ ಪೂಜಿಸಿದರು.
ಅದಮಾರು ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಮತ್ತು ಶ್ರೀ ಸೋದೆ ಮಠಾಧೀಶ ವಿಶ್ವವಲ್ಲಭತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಸಂಪ್ರದಾಯ ಪಾಲನೆ
ಅಷ್ಟ ಮಠದ ಸಂಪ್ರದಾಯದಂತೆ ನೂತನ ಸನ್ಯಾಸಿಗಳು ಚಾತುರ್ಮಾಸ್ಯ ವೃತ ಸಮಾಪ್ತಿ ಬಳಿಕ ಪಟ್ಟದ ದೇವರು ಹಾಗೂ ಕೃಷ್ಣ ದೇವರನ್ನು ಪೂಜಿಸಲು ಅರ್ಹತೆ ಪಡೆಯುತ್ತಾರೆ. ಇದರಂತೆ ಮೇ ತಿಂಗಳಿನಲ್ಲಿ ಶಿರೂರು ಮಠದ ಪೀಠಾಧಿಪತಿಯಾಗಿ ಸೋದೆ ಶ್ರೀಗಳಿಂದ ಸನ್ಯಾಸ ಸ್ವೀಕರಿಸಿದ ವೇದ ವರ್ಧನ ತೀರ್ಥರು ಸೋಂದಾ ಕ್ಷೇತ್ರದಲ್ಲಿ ಪ್ರಥಮ ಚಾತುರ್ಮಾಸ್ಯವ್ರತ ಕೈಗೊಂಡಿದ್ದರು.