ಕಂದಾಯ, ಮೆಸ್ಕಾಂ ಸಮಸ್ಯೆ ನಿವಾರಣೆ

gramasabhe
ಶಿರೂರು ಪಂಚಾಯಿತಿ ಗ್ರಾಮಸಭೆಯಲ್ಲಿ ನೋಡೆಲ್ ಅಧಿಕಾರಿ ಯೋಗೇಶ್ ಮಾತನಾಡಿದರು
Published on

ಬೈಂದೂರು: ಶಿರೂರು ಪಂಚಾಯಿತಿ ಗ್ರಾಮಸಭೆ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು. ಕಂದಾಯ, ಮೆಸ್ಕಾಂ ಸೇರಿ ವಿವಿಧ ಇಲಾಖೆಗಳ ಸಮಸ್ಯೆ ಸರಿಪಡಿಸಲು ಸಾರ್ವಜನಿಕರು ಆಗ್ರಹಿಸಿದರು.

ಹೆದ್ದಾರಿಯಲ್ಲಿ ಚರಂಡಿ ಸಮಸ್ಯೆ, ಅಪಘಾತ ನಿಯಂತ್ರಣ, ಬೀದಿದೀಪ ಸೇರಿದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಶೀಘ್ರ ಸರಿಪಡಿಸಬೇಕೆಂದು ಗ್ರಾಪಂ ಸದಸ್ಯ ನಾಗಯ್ಯ ಶೆಟ್ಟಿ ಆಗ್ರಹಿಸಿದರು.

ಹೆದ್ದಾರಿ ಗುತ್ತಿಗೆದಾರ ಸಂಸ್ಥೆಯವರು ಸ್ಥಳೀಯ ಕೆಲವು ಸ್ವಯಂಘೋಷಿತ ಪ್ರಭಾವಿಗಳ ಕುಮ್ಮಕ್ಕಿನಿಂದ ಪಂಚಾಯಿತಿ ಸೇರಿದಂತೆ ಯಾರ ಮಾತು ಕೇಳುತ್ತಿಲ್ಲ. ಇದಕ್ಕೆಲ್ಲ ಶೀಘ್ರ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ವಿಪರೀತಕ್ಕೆ ಹೋಗಬಹುದು ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಐಆರ್‌ಬಿ ಅಧಿಕಾರಿಗಳು ಬೀದಿ ದೀಪ, ಚರಂಡಿ ಸಮಸ್ಯೆ, ಸರ್ವಿಸ್ ರಸ್ತೆ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದರು. ಹೆದ್ದಾರಿ ಇಲಾಖೆ ವ್ಯಾಪ್ತಿಗೆ ಹೊರತುಪಡಿಸಿದ ವಿಷಯಗಳನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.

ಶಿರೂರು ಗ್ರಾಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ಗ್ರಾಮ ಲೆಕ್ಕಾಧಿಕಾರಿ ವಿಜಯ್ ಕುಮಾರ್, ವಿವಿಧ ಇಲಾಖಾಧಿಕಾರಿಗಳು ಇದ್ದರು. ನೋಡೆಲ್ ಅಧಿಕಾರಿ ಯೋಗೇಶ್ ಪ್ರಾಸ್ತಾವಿಸಿದರು. ಕಾರ್ಯದರ್ಶಿ ಮುಕ್ತಾ ನಾಯ್ಕ ಸ್ವಾಗತಿಸಿದರು. ಶಂಕರ ಬಿಲ್ಲವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net