ಈಶ್ವರ ಮಲ್ಪೆಗೆ ದುಡ್ಡು ಕೊಟ್ಟು ಬರ್ತೇನೆ, ಆದರೆ......ಸತೀಶ ಸೈಲ್‌ ಹಾಗೆ ಹೇಳಿದ್ದೇಕೆ..?

satish-sail
Published on

ಕಾರವಾರ: ಈಶ್ವರ ಮಲ್ಪೆ ಅವರ ಮನೆಗೆ ಹೋಗಿ ವೈಯಕ್ತಿಕವಾಗಿ ಹಣ ಕೊಟ್ಟು ಬರುತ್ತೇನೆ. ಆದರೆ, ಅವರ ಮುಖ ನೋಡಿ ಅಲ್ಲ. ಅವರ ಮಕ್ಕಳ ಮುಖ ನೋಡಿ ಹಣ ಕೊಡ್ತೇನೆ ಎಂದು ಶಾಸಕ ಸತೀಶ ಸೈಲ್‌ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈಶ್ವರ ಮಲ್ಪೆ ಅವರು ಮೊದಲ ಹಂತದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆದರೆ, ಕೇವಲ ಮುಳುಗು ತಜ್ಞರಿಂದ ಕೆಲಸ ಆಗುತ್ತಿರಲಿಲ್ಲ. ಇದರಿಂದ ಗೋವಾದಿಂದ ಡ್ರಜ್ಜಿಂಗ್‌ ಯಂತ್ರ ತರಿಸಬೇಕಾಯಿತು. ಅವರಿಗೆ ಗುತ್ತಿಗೆ ನೀಡಲಾಗಿದೆ. ಅವರ ಜತೆಗೆ ಮುಳುಗು ತಜ್ಞರಿದ್ದಾರೆ. ಹಾಗಿರುವಾಗ ಮುಳುಗು ತಜ್ಞರ ಅವಶ್ಯಕತೆ ಇರಲಿಲ್ಲ. ಆದರೆ, ಈಶ್ವರ ಮಲ್ಪೆ ಅವರು ಯು ಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿ, ಜಿಲ್ಲಾಡಳಿತದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಇದರಿಂದ ಜಿಲ್ಲಾಡಳಿತದ ಅಧಿಕಾರಿಗಳಿಗೂ ಬೇಸರವಾಗಿದೆ. ಇದರಿಂದ ಕಾರ್ಯಾಚರಣೆಯಿಂದ ಹೊರ ನಡೆಯುವಂತೆ ಸೂಚಿಸಿದ್ದಾರೆ.

ಮಲ್ಪೆ ಅವರ ಮಕ್ಕಳು ಅಂಗವಿಕಲರು ಎಂಬುದನ್ನು ವಿಡಿಯೋ ಮೂಲಕ ನೋಡಿದ್ದೇನೆ. ಹಾಗಾಗಿ ಅವರಿಗೆ ಹಣ ನೀಡಲಿದ್ದೇನೆ ಎಂದರು.

ಈಶ್ವರ ಮಲ್ಪೆ 17 ದಿನ ಶಿರೂರಿನಲ್ಲಿ ಮುಳುಗಿದ್ದರು. ಸ್ಕೂಟಿ, ಲಾರಿಯ ಅವಶೇಷಗಳನ್ನು ಹುಡುಕಿದ್ದರು. ಆದರೆ, ಅದಕ್ಕೆ ಅವರು ಯಾವುದೇ ಹಣ ಪಡೆದಿರಲಿಲ್ಲ. ನಾಪತ್ತೆಯಾದ ಕುಟುಂಬಗಳ ದುಃಖ ನೋಡಿ ತಾವು ಕಾರ್ಯಾಚರಣೆ ಮಾಡುತ್ತಿರುವುದಾಗಿ ಅವರು ತಿಳಿಸಿದ್ದರು. ಆದರೆ, ಡ್ರಜ್ಜಿಂಗ್‌ ಕಾರ್ಯಾಚರಣೆ ಪ್ರಾರಂಭವಾದ ನಂತರ ಜಿಲ್ಲಾಡಳಿತ ಈಶ್ವರ ಮಲ್ಪೆ ಅವರನ್ನು ಹೊರ ನಡೆಯುವಂತೆ ಸೂಚಿಸಿತ್ತು.

ಈಶ್ವರ ಮಲ್ಪೆ ಇದರಿಂದ ಬೇಸರಗೊಂಡು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಕಿಡಿ ನುಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net