

ಹುಬ್ಬಳ್ಳಿ: ಉಡುಪಿಯ ರಾಷ್ಟ್ರಕವಿ ಎಂ. ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಹೈಯರ್ ಎಜುಕೇಷನ್ ಟ್ರಸ್ಟ್ ವತಿಯಿಂದ ನೀಡಲಾಗುವ "ಸೇಡಿಯಾಪು ಕೃಷ್ಣಭಟ್ಟ' ಪ್ರಶಸ್ತಿಯನ್ನು ಇಲ್ಲಿಯ ಹಿರಿಯ ವಿದ್ವಾಂಸ ಡಾ. ಬಿ.ವಿ. ಶಿರೂರು ಅವರಿಗೆ ಇತ್ತೀಚೆಗೆ ಪ್ರದಾನ ಮಾಡಲಾಯಿತು.
ಇಲ್ಲಿಯ ಮಂಜುನಾಥ ನಗರದ ನಿವಾಸದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಡುಪಿಯಿಂದ ಆಗಮಿಸಿದ್ದ ಗೋವಿಂದ ಪೈ ಸಂಶೋಧನ ಕೇಂದ್ರದ ಕಾರ್ಯದರ್ಶಿ ಪ್ರೊ. ಜಗದೀಶ ಶೆಟ್ಟಿ ಮತ್ತು ಪಾದೇಕಲ್ ವಿಷ್ಣು ಭಟ್, ವೆಂಕಟೇಶ್, ವಿನಾಯಕ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಡಾ. ಶಿರೂರು ಅವರಿಗೆ 2024ನೇ ಸಾಲಿನ ಪ್ರಶಸ್ತಿ ನೀಡುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿ. ಶಾಸನ, ಗ್ರಂಥ ಸಂಪಾದನೆ, ಜೈನ ಸಾಹಿತ್ಯ, ವೀರಶೈವ ಸಾಹಿತ್ಯ, ವಚನ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಹೆಸರಾಗಿದ್ದಾರೆ ಎಂದು ಟ್ರಸ್ಟ್ ಪದಾಧಿಕಾರಿಗಳು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಿ.ವಿ. ಶಿರೂರು ಅವರು, ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ವ್ಯಾಕರಣ ಮತ್ತು ಛಂದಸ್ಸಿನಂಥ ಶಾಸ್ತ್ರೀಯ ಪಾಂಡಿತ್ಯದ ಪಠ್ಯವನ್ನು ವಿಶ್ವವಿದ್ಯಾಲಯಗಳು ಕಡಿತಗೊಳಿಸಿ ಭಾಷಾ ಗಟ್ಟಿತನ ಹಾಳು ಮಾಡುತ್ತಿರುವುದು ವಿಷಾದನೀಯ. ಈ ದಿಸೆಯಲ್ಲಿ ಯುವಕರಿಗೆ ಗೋವಿಂದ ಪೈ ಮತ್ತು ಸೇಡಿಯಾಪು ಕೃಷ್ಣಭಟ್ಟರ ಶಾಸ್ತ್ರೀಯ ಪಾಂಡಿತ್ಯ ಪರಿಚಯಿಸುವ ಕೆಲಸ ಮಾಡಬೇಕಿದೆ ಎಂದರು.
ಕಾಡಸಿದ್ದೇಶ್ವರ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ. ಉಮಾ ನೆರ್ಲೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, ದಕ್ಷಿಣ ಕನ್ನಡದವರು ಡಾ. ಶಿರೂರ ಅವರಂತಹ ಮಹಾನ್ ಸಂಶೋಧಕರನ್ನು ಗುರುತಿಸಿ ಸನ್ಮಾನಿಸಿರುವುದು ನಮ್ಮನ್ನು ನಾವು ಗೌರವಿಸಿಕೊಂಡಂತೆ ಎಂದರು.
ಡಾ. ಸಣ್ಣವಿರಣ್ಣ ದೊಡ್ಡಮನಿ, ಡಾ. ಹನುಮಾಕ್ಷಿ ಗೋಗಿ, ಡಾ. ಧನವಂತ ಹಾಜವಗೋಳ, ಸುರೇಶ್ ಹೊರಕೇರಿ, ಎಸ್.ಎಂ. ಪಾಟೀಲ್, ಮಂಜುನಾಥ, ಡಾ. ಜಯಶ್ರೀ ಹಿರೇಮಠ, ಡಾ. ಪ್ರಭಾವತಿ, ಕೃತಿಕಾ ಶಿರೂರು ಮುಂತಾದವರು ಉಪಸ್ಥಿತರಿದ್ದರು.